ಜಿಲ್ಲೆ

ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು ಶಿಕ್ಷೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಸವರಾಜ ಫಕ್ಕೀರಪ್ಪ ಬಾರ್ಕಿ ಎಂಬುವರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1 ತೀರ್ಪು ನೀಡಿದೆ.

ಬಾಲಕಿ ಅಪ್ರಾಪ್ತ ಎಂದು ಗೊತ್ತಿದ್ದರೂ 2022ರ ಸೆ.5ರಂದು ಬಾಲಕಿಯೊಂದಿಗೆ ಮಾತನಾಡಿ, ಮೆಡಿಕಲ್ ಶಾಪ್‌ಗೆ ಬಿಡುವುದಾಗಿ ಹೇಳಿ ತನ್ನ ಮೋಟಾರ್ ಸೈಕಲ್‌ನಲ್ಲಿ ಹತ್ತಿಸಿಕೊಂಡು ಗೋವಿನಜೋಳದ ಹೊಲಕ್ಕೆ ಕರೆದುಕೊಂಡು ಹೋಗಿ ಒತ್ತಾಯದಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಯಷವನ್ನು ಯಾರಿಗೂ ಹೇಳದಂತೆ ಜೀವಬೇದರಿಕೆ ಹಾಕಿದ್ದ ಎಂದು ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್.ಬಡಿಗೇರ ಪ್ರಕರಣದ ತನಿಖೆ ನಡೆಸಿ, ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ನಿಂಗೌಡ ಪಾಟೀಲ ಅವರು ಬಸವರಾಜ ಬಾರ್ಕಿ ಮೇಲೆ ಕಲಂ 376, 506 ಭಾ.ದಂ.ಸಂ. ಮತ್ತು ಕಲಂ. 6, 4, 12 ಪೋಕ್ಸೋ ಕಾಯ್ದೆ-2012ರ ಅಡಿಯಲ್ಲಿ ದಾಖಲಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ನೊಂದ ಬಾಲಕಿಗೆ ಒಂದು ಲಕ್ಷ ರೂ. ಪರಿಹಾರ ಹಾಗೂ ರಾಜ್ಯ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ರಾಜ್ಯ ಸರ್ಕಾರ ನೊಂದ ಬಾಲಕಿಗೆ ನಾಲ್ಕು ಲಕ್ಷ ರೂ. ಪರಿಹಾರ ನೀಡಬೇಕೆಂದು ಎಂದು ಸೂಚಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಶಂಕರಗೌಡ ಪಾಟೀಲ ಪ್ರಕರಣದ ಪರ ವಾದ ಮಂಡಿಸಿದರು.