ಹಾವೇರಿ: ಜಮೀನು ಬಿಟ್ಟುವ ಕೊಡುವ ವಿಷಯವಾಗಿ ಕೊಲೆ ಯತ್ನಿಸಿದ ಗುತ್ತಲ ಗ್ರಾಮದ ಶೇಖಪ್ಪ ಹನುಮಂತಪ್ಪ ಲಮಾಣಿ ಎಂಬಾತನಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 1.10 ಲಕ್ಷ ರೂ. ದಂಡ ವಿಧಿಸಿ ಇಲ್ಲಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಂ.ಟಿ.ಎಸ್.ಸಿ- 1 ನ್ಯಾಯಾಲಯ ತೀರ್ಪು ನೀಡಿದೆ.
ಗುತ್ತಲ ಗ್ರಾಮದಲ್ಲಿ ಸುಮಾರು 10 ವರ್ಷಗಳ ಹಿಂದೆ ಶೇಖಪ್ಪ ಲಮಾಣಿ, ನಾಗೇಂದ್ರಪ್ಪ ಲಮಾಣಿ ಹಾಗೂ ಇತರರು ದುರಗಪ್ಪ ಮಡಿವಾಳರ ಅವರ 11 ಗುಂಟೆ ಜಮೀನು ಖರೀದಿಸುವ ಸಮಯದಲ್ಲಿ ಕಾನೂನು ತೊಡಕಿನ ಕಾರಣ ಒಬ್ಬರ ಹೆಸರಿನಲ್ಲಿ ಖರೀದಿಸಿದ್ದರು. ನಂತರ ತಮ್ಮ ತಮ್ಮ ಜಾಗೆಯನ್ನು ಬಿಟ್ಟುಕೊಡುವಂತೆ ಛಾಯಪ್ಪ ಲಮಾಣಿ ಹಾಗೂ ಚನ್ನಪ್ಪ ಲಮಾಣಿ ಸಮಕ್ಷಮ ಮಾತನಾಡಿಕೊಂಡು ಶೇಖಪ್ಪ ಲಮಾಣಿ ಹೆಸರಿಗೆ ಜಮೀನು ಖರೀದಿಸಿದ್ದರು.
ಲಾಲವ್ವ ಲಮಾಣಿ ಹಾಗೂ ಅವಳ ಮಗ ಶಿವಪ್ಪ ಲಮಾಣಿ 17 ಅಕ್ಟೋಬರ್ 2017ರಂದು ಶೇಖಪ್ಪ ಲಮಾಣಿ ಮನೆಗೆ ತೆರಳಿ ತಮ್ಮ ಜಾಗೆ ಬಿಟ್ಟುಕೊಡಲು ಪಂಚಾಯತಿಗೆ ಬರುವಂತೆ ಹೇಳಿದ್ದರು. ಈ ವೇಳೆ ಶೇಖಪ್ಪ ಲಮಾಣಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಲವ್ವ ಲಮಾಣಿ ಹಾಗೂ ಅವಳ ಮಕ್ಕಳಾದ ಶಿವಪ್ಪ ಲಮಾಣಿ ಹಾಗೂ ಮಂಜುನಾಥ ಲಮಾಣಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುತ್ತಲ ಠಾಣೆಯ ಅಂದಿನ ತನಿಖಾಧಿಕಾರಿ ಪಿಎಸ್‌ಐ ಬಿ.ಎ.ಕಾಮನಬೈಲ್ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಶೇಖಪ್ಪ ಲಮಾಣಿ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಂ.ಟಿ.ಎಸ್.ಸಿ- 1 ನ್ಯಾಯಾಲಯದ ನ್ಯಾಯಾಧೀಶ ನಿಂಗೌಡ ಪಾಟೀಲ ಅವರು ಅವನಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 1.10 ಲಕ್ಷ ರೂ. ದಂಡ ವಿಧಿಸಿದ್ದಾರೆ. ನೊಂದವರಿಗೆ 25 ಸಾವಿರ ರೂ. ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ 50 ಸಾವಿರ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ವಿಜಯಕುಮಾರ ಪಾಟೀಲ ವಾದ ಮಂಡಿಸಿದ್ದರು.