ಜಿಲ್ಲೆ

ಲೈಂಗಿಕ ದೌರ್ಜನ್ಯ ಎಸಗಿದವನಿಗೆ 10 ವರ್ಷ ಕಠಿಣ ಶಿಕ್ಷೆ; ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದ್ದ ಪ್ರಕರಣ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.60 ಲಕ್ಷ ರೂ. ದಂಡ ವಿಧಿಸಿ ವಿಶೇಷ ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ.-1)ದ ನ್ಯಾಯಾಧೀಶ ನಿಂಗೌಡ ಪಾಟೀಲ ಸೋಮವಾರ ತೀರ್ಪು ನೀಡಿದ್ದಾರೆ.
ಅಸ್ಪಾಕ ಚಮನಸಾಬ ಕೋಟಿ ಶಿಕ್ಷೆಗೀಡಾದವ. 2017ರಲ್ಲಿ ಅಪ್ರಾಪ್ತ ಬಾಲಕಿ ತಮ್ಮ ಜಮೀನಿನಲ್ಲಿ ಒಬ್ಬಳೇ ಕೆಲಸ ಮಾಡುತ್ತಿದ್ದಾಗ ಅಸ್ಪಾಕ ಕೋಟಿ ಆಕೆಯನ್ನು ಪುಸಲಾಯಿಸಿ, ಆಕೆಯ ಇಚ್ಛೆಯ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾನಗಲ್ಲ ವೃತ್ತದ ತನಿಖಾಧಿಕಾರಿ ಸಿಪಿಐ ಎಸ್.ಆರ್. ಗಣಾಚಾರಿ ಪ್ರಕರಣದ ತನಿಖೆ ನಡೆಸಿ, ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಫೋಕ್ಸೋ ಕಾಯ್ದೆ 2012ರ ಅಡಿಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಸ್ಪಾಕ ಚಮನಸಾಬ ಕೋಟಿಗೆ 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 1.60 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡದ ಹಣದಲ್ಲಿ ನೊಂದ ಬಾಲಕಿಗೆ ಒಂದು ಲಕ್ಷ ರೂ. ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಪಾಟೀಲ ವಾದ ಮಂಡಿಸಿದ್ದರು.