ಜಿಲ್ಲೆ

ವ್ಯಕ್ತಿಯೊಬ್ಬನ ಹತ್ಯಗೈದಿದ್ದ ದಂಪತಿಗೆ ಜೀವಾವಧಿ ಶಿಕ್ಷೆ

ಹಾವೇರಿ: ಪತ್ನಿಯ ಅನೈತಿಕ ಸಂಬಂಧದ ವಿಚಾರ ತಿಳಿದ ಪತಿ ಆಕೆಯ ಪ್ರಿಯಕರನಿಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ- ಪತ್ನಿ ಇಬ್ಬರಿಗೂ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ 37 ಸಾವಿರ ರೂ. ದಂಡ ವಿಧಿಸಿ ಹಾವೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ದೇವಿಹೊಸೂರ ಗ್ರಾಮದ ದಾವಲಸಾಬ ಶರೀಫಸಾಬ ಮೆಳ್ಳಾಗಟ್ಟಿ ಹಾಗೂ ಈತನ ಪತ್ನಿ ಫಾತಿಮಾಬಾನು ಶಿಕ್ಷೆಗೀಡಾದವರು. ಕಬ್ಬೂರ ಗ್ರಾಮದ ಮಹ್ಮದಜಾಫರ್ ವಾಲೀಕಾರ ಹತ್ಯೆಗೀಡಾಗಿದ್ದವ.
ಪ್ರಕರಣದ ವಿವರ :
ದಾವಲಸಾಬ ಹಾಗೂ ಮಹ್ಮದಜಾಫರ್ ಇಬ್ಬರೂ ಬ್ಯಾಡಗಿ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದರು. ದಾವಲಸಾಬ ಯಾವುದೋ ವಿಚಾರವಾಗಿ ಜಾಫರ್‌ನಿಂದ ಹತ್ತು ಸಾವಿರ ರೂ. ಸಾಲ ಪಡೆದಿದ್ದ. ದಾವಲಸಾಬ ತನ್ನ ಮೊಬೈಲ್‌ಅನ್ನು ಸಂಪರ್ಕಕ್ಕಾಗಿ ಮನೆಯಲ್ಲೇ ಬಿಟ್ಟು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಜಾಫರ್ ಫೋನ್ ಮಾಡಿದಾಗ ದಾವಲಸಾಬನ ಪತ್ನಿ ಫಾತಿಮಾಬಾನು ಫೋನ್ ರಿಸೀವ್ ಮಾಡಿ ಮಾತನಾಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ಅನೈತಿಕ ಸಂಬಂಧದವರೆಗೆ ಮುಂದುವರಿದಿತ್ತು.
ಮೊಬೈಲ್ ಫೋನ್‌ನಲ್ಲಿ ಇಬ್ಬರ ಸಂಭಾಷಣೆ ರೆಕಾರ್ಡರ್‌ನಿಂದ ಅನೈತಿಕ ಸಂಬಂಧದ ಬಗ್ಗೆ ದಾವಲಸಾಬ ಪತ್ತೆ ಹಚ್ಚಿದ್ದ. 2017ರ ಸೆಪ್ಟೆಂಬರ್ 15ರಂದು ಫಾತಿಮಾಬಾನುಳಿಂದ ಫೋನ್‌ಮಾಡಿಸಿ, ಜಾಫರ್‌ನನ್ನು ಮನೆಗೆ ಕರೆಸಿದ್ದ. ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಹೆಂಡತಿಯೊಂದಿಗೆ ಸೇರಿ ಮೃತದೇಹವನ್ನು ಮುಳ್ಳಿನ ಬೇಲಿಯಲ್ಲಿ ಮುಚ್ಚಿಟ್ಟಿದ್ದ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಸಿಪಿಐ ಬಸು ಚವ್ಹಾಣ ಪ್ರಕರಣದ ತನಿಖೆ ನಡೆಸಿ, ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಗುರುವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಸರೋಜಾ ಜಿ. ಕೂಡಲಗಿಮಠ ವಾದ ಮಂಡಿಸಿದ್ದರು.