ಜಿಲ್ಲೆ

ಬೈಕ್ ಮಾಲೀಕನಿಗೆ 83 ಸಾವಿರ ಪಾವತಿಸಲು ಆದೇಶ; ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಕಳುವಾದ ದ್ವಿಚಕ್ರ ವಾಹನದ ಐಡಿವಿ (ಇನ್ಸೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ) ಮೊತ್ತ 83,179 ರೂ.ಯನ್ನು 30 ದಿನದೊಳಗಾಗಿ ವಾಹನ ಮಾಲೀಕರಿಗೆ ಪಾವತಿಸುವಂತೆ ಜನರಲ್ ಇನ್ಸೂರೆನ್ಸ್ ಕಂಪನಿಯೊಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
ಶಿಗ್ಗಾಂವಿ ತಾಲೂಕು ಮುಳಕೇರಿ ಗ್ರಾಮದ ವಿಜಯಕುಮಾರ ಶಿಗ್ಗಟ್ಟಿ ಶಿಗ್ಗಾಂವಿಯ ಶೋರೂಮ್ ಒಂದರಲ್ಲಿ 1.14 ಲಕ್ಷ ರೂ. ಕೊಟ್ಟು ಬಜಾಜ್ ಪಲ್ಸರ್ ದ್ವಿಚಕ್ರ ವಾಹನ ಖರೀದಿಸಿದ್ದರು. ಅದಕ್ಕೆ ಜನರಲ್ ಇನ್ಸೂರೆನ್ಸ್ ಕಂಪನಿಯೊಂದರ ಮೂಲಕ ವಿಮಾ ಪಾಲಿಸಿ ಮಾಡಿಸಿದ್ದರು. 2021ರ ನವೆಂಬರ್ 17ರಂದು ಶಿಕಾರಿಪುರ ತಾಲೂಕು ತಡಕನಹಳ್ಳಿ ಗ್ರಾಮದಲ್ಲಿ ರಸ್ತೆಬದಿ ಬೈಕ್ ನಿಲ್ಲಿಸಿ, ಊಟ ಮಾಡಲು ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ವಾಹನ ಕಳುವಾಗಿತ್ತು. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಂತರ ವಾಹನ ಕಳುವಾದ ಹಿನ್ನೆಲೆಯಲ್ಲಿ ಕ್ಲೇಮ್ ಹಣ ಪಾವತಿಸುವಂತೆ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ವಾಹನ ಕಳುವಾದ 26 ದಿನಗಳ ನಂತರ ಮಾಹಿತಿ ನೀಡಿದ ಕಾರಣ ವಿಮಾ ಕಂಪನಿ ಪರಿಹಾರ ನಿರಾಕರಿಸಿತ್ತು. ಹಾಗಾಗಿ, ವಿಜಯಕುಮಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ ನಡೆಸಿತು. ಕಳುವಾದ ಬೈಕಿನ ಐಡಿವಿ ಬೆಲೆ 83,179 ರೂ. ಹಾಗೂ ಮಾಸಿಕ -ದೈಹಿಕ ವ್ಯಥೆಗೆ ಎರಡು ಸಾವಿರ ಮತ್ತು ಪ್ರಕರಣದ ವೆಚ್ಚ ಎರಡು ಸಾವಿರ ರೂ.ಯನ್ನು 30 ದಿನದೊಳಗಾಗಿ ಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.