ಜಿಲ್ಲೆ

ವಿದ್ಯಾರ್ಥಿಗೆ ಪರಿಹಾರ ಪಾವತಿಸಲು ಆದೇಶ; ವಾ.ಕ.ರಾ.ರ.ಸಾ. ಸಂಸ್ಥೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮಳೆಯಿಂದ ಹಾನಿಯಾದ ವಿಕಲ ಚೇತನ ಹಾಗೂ ಮಾನಸಿಕ ಅಸ್ವಸ್ಥ ವಿದ್ಯಾರ್ಥಿಯೊಬ್ಬನ ಬಸ್‌ಪಾಸ್ ಮಾನ್ಯ ಮಾಡದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 14 ಸಾವಿರ ರೂ. ಪರಿಹಾರ ಮೊತ್ತವನ್ನು 30 ದಿನದೊಳಗಾಗಿ ವಿದ್ಯಾರ್ಥಿಗೆ ಪಾವತಿಸುವಂತೆ ಆದೇಶ ಹೊರಡಿಸಿದೆ.
ಹೊಸರಿತ್ತಿ ಗ್ರಾಮದ ವಿದ್ಯಾರ್ಥಿ ಮಂಜುನಾಥ ವೀರಯ್ಯ ಹುಲಮನಿ ಎಂಬಾತ ವಿಕಲಚೇತನ ಹಾಗೂ ಮಾನಸಿಕ ಅಸ್ವಸ್ಥನಿರುವ ಹಿನ್ನೆಲೆಯಲ್ಲಿ 660 ರೂ. ಪಾವತಿಸಿ ಒಂದು ವರ್ಷದ ಅವಧಿಗೆ ವಿಕಲಚೇತನರ ಪಾಸ್ ಪಡೆದು ತನ್ನ ಗ್ರಾಮದಿಂದ ಪ್ರತಿನಿತ್ಯ ಕನವಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪ್ರಯಾಣಿಸುತ್ತಿದ್ದನು. 2022, ಸೆಪ್ಟೆಂಬರ್ 29ರಂದು ಕಾಲೇಜಿಗೆ ತೆರಳುವ ಸಮಯದಲ್ಲಿ ಅಕಾಲಿಕ ಮಳೆಯಿಂದಾಗಿ ಆತನ ಬಸ್‌ಪಾಸ್ ಒದ್ದೆಯಾಗಿತ್ತು. ಅದರ ಸಂಖ್ಯೆ ಮತ್ತು ಸಹಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ, ಹೆಸರು ಮತ್ತು ಪ್ರಯಾಣಿಸಬೇಕಾದ ಊರುಗಳ ಹೆಸರು ಅಳಿಸಿರುವ ಕಾರಣ ಬಸ್‌ನಲ್ಲಿ ಈ ಪಾಸ್‌ನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಸ್ ನಿರ್ವಾಹಕರು ನಿರಾಕರಿಸಿದ್ದರು.
ಪಾಲಕರೊಂದಿಗೆ ಮಂಜುನಾಥ ನಗರದ ಬಸ್ ನಿಲ್ದಾಣದಲ್ಲಿ ಬಸ್ ಪಾಸ್ ವಿತರಿಸುವ ವಿಭಾಗದಲ್ಲಿ ಪಾಸ್‌ನ ಇನ್ನೊಂದು ಪ್ರತಿ ನೀಡುವಂತೆ ವಿನಂತಿಸಿಕೊಂಡಿದ್ದರು. ಇದಕ್ಕೆ ಅಧಿಕಾರಿಗಳು ನಿರಾಕರಿಸಿದ್ದರು ಹಾಗೂ ಪಾಸ್ ಅವಧಿ ಕೊನೆಗೊಳ್ಳದಿದ್ದರೂ ಮೊತ್ತೊಮ್ಮೆ ಹಣ ಪಾವತಿಸಿ ಪಾಸ್ ಪಡೆಯಲು ಸೂಚಿಸಿದ್ದರು. ವಿದ್ಯಾರ್ಥಿಯು ಬಡವನಾದ ಕಾರಣ ಪರೀಕ್ಷೆ ಬರೆಯಲೂ ಸಾಧ್ಯವಾಗಿರಲಿಲ್ಲ. ಈ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಹಾಗೂ ಸದಸ್ಯೆ ಉಮಾದೇವಿ. ಎಸ್. ಹಿರೇಮಠ ನೇತೃತ್ವದ ತಂಡ, ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಉಂಟಾದ ತೊಂದರೆಗೆ 10 ಸಾವಿರ ರೂ., ಮಾನಸಿಕ ಮತ್ತು ದೈಹಿಕ ವ್ಯಥೆಗೆ ಎರಡು ಸಾವಿರ ರೂ. ಹಾಗೂ ಪ್ರಕರಣದ ಖರ್ಚು ಎರಡು ಸಾವಿರ ರೂ. ಸೇರಿ 14 ಸಾವಿರ ರೂ. ಮೊತ್ತವನ್ನು 30 ದಿನದೊಳಗಾಗಿ ನೊಂದ ವಿದ್ಯಾರ್ಥಿಗೆ ಪಾವತಿಸುವಂತೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಆಯೋಗ ಸೂಚಿಸಿದೆ.