ಹಾವೇರಿ: ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ಮತಗಳ್ಳತನಕ್ಕೆ ಸಹಕರಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಶನಿವಾರ ‘ವೋಟ್ ಚೋರ್ ಗದ್ದಿ ಚೋಡ್’ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಬಿಜೆಪಿಗೆ ಸಹಕಾರಿ ಆಗುವಂತೆ ಕೆಲಸ ಮಾಡುತ್ತಿದೆ. ಒಂದೊಂದು ಬೂತ್‌ನಲ್ಲಿ ಕಾಂಗ್ರೆಸ್ ಪರ ಓಟು ಒತ್ತುವ ದಲಿತರು, ಮುಸಲ್ಮಾನರ 50ರಿಂದ 60 ಓಟುಗಳನ್ನು ಡಿಲೀಟ್ ಮಾಡಿಸಿ, ತಮ್ಮ ಪರ ಮತ ಹಾಕುವವರ 50- 60 ಓಟುಗಳನ್ನು ಹೊಸದಾಗಿ ಸೇರಿಸುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ವಿಧಾನಸಭೆ ಚುನಾವಣೆ ಹಾಗೂ ಹಾವೇರಿ ಲೋಕಸಭಾ ಚುನಾವಣೆಯಲ್ಲಿಯೂ ಮತಗಳ್ಳತನ ಆಗಿದೆ. ಪ್ರದಾನಿ ನರೇಂದ್ರ ಮೋದಿ ಅವರು ನ್ಯಾಯಯುತವಾಗಿ ಅಧಿಕಾರ ಪಡೆದಿದ್ದಾರಾ ? ಅಥವಾ ವೋಟ್ ಚೋರಿ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರಾ? ಎಂಬುದನ್ನು ಜನರಿಗೆ ತಿಳಿಸಬೇಕಿದೆ. ಚುನಾವಣೆಯಲ್ಲಿ ಒಂದು ವಿಚಾರ ಇಟ್ಟುಕೊಂಡು ಹಾಗೂ ಮತಗಳ್ಳತನ ಮಾಡಿ ಅಧಿಕಾರ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಬಿಜೆಪಿಗರು. ಈ ಬಗ್ಗೆ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಬೇಕಿದೆ. ಬಿಹಾರ ಚುನಾವಣೆಯಲ್ಲಿ ಈ ಬಗ್ಗೆ ಜನಜಾಗೃತಿ ಆಗುತ್ತಿದ್ದು, ಬಿಹಾರದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ ಮಾತನಾಡಿ, ಇವಿಎಂನಿಂದಲೂ ಮೋಸ ಆಗುತ್ತಿದೆ ಎಂಬುದನ್ನು ಮನಗಂಡು ರಾಜ್ಯ ಸರ್ಕಾರ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ತೀರ್ಮಾನ ತೆಗೆದುಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಒಂದು ತಿಂಗಳು ಮೊದಲೇ ಮತದಾರರ ಪಟ್ಟಿ ಕೊಟ್ಟಿರುತ್ತಾರೆ. ಅದನ್ನು ನಮ್ಮ ಕಾರ್ಯಕರ್ತರು ಗಮನಿಸಿ ಸಮಸ್ಯೆ ಇದ್ದಲ್ಲಿ ಸರಿಪಡಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಯಾಸೀರ್‌ಖಾನ್ ಪಠಾಣ, ಹಾವೇರಿ ಆಶ್ರಯ ಸಮಿತಿ ಅಧ್ಯಕ್ಷ ಜಗದೀಶ ಬೆಟಗೇರಿ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ತಾಲೂಕು ಅಧ್ಯಕ್ಷ ಎಂ.ಎಂ.ಮೈದೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭು ಬಿಷ್ಟನಗೌಡ್ರ, ಎಸ್.ಎಫ್.ಎನ್.ಗಾಜಿಗೌಡ್ರ, ಪ್ರೇಮಾ ಪಾಟೀಲ, ಬಸವರಾಜ ಹೆಡಿಗೊಂಡ, ದಾಸಪ್ಪ ಕರ್ಜಗಿ, ಐ.ಯು.ಪಠಾಣ, ಶಂಕರ ಮೆಹರವಾಡೆ, ಸಂಜಯಗಾಂಧೀ, ಇತರರಿದ್ದರು.