ಜಿಲ್ಲೆ

ಸಿಎಂ ಷೋಕಾಸ್ ನೋಟಿಸ್ ವಾಪಸ್ ಪಡೆಯಲಿ; ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ

ಹಾವೇರಿ: ರಾಜ್ಯಪಾಲರ ನಡೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಅಹಿಂದ ಹಾಗೂ ಇತರ ಸಂಘಟನೆಗಳ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೀಡಿರುವ ಷೋಕಾಸ್ ನೋಟಿಸ್ ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ರ‌್ಯಾಲಿಯಲ್ಲಿ ನೂರಾರು ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಪಾಲ್ಗೊಂಡಿದ್ದರು. ಸಿಎಂ ಬೆಂಬಲಿಸಿ, ರಾಜ್ಯಪಾಲರ ನಡೆ ಖಂಡಿಸಿ ಘೋಷಣೆ ಕೂಗಿದರು. ಪ್ಲೇಕಾರ್ಡ್ ಹಿಡಿದು ಆಕ್ರೋಶ ಹೊರಹಾಕಿದರು. ಎಂಜಿ ರಸ್ತೆ, ಜೆಪಿ ವೃತ್ತದ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ರ‌್ಯಾಲಿ ನಡೆಸಿದರು. ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ವಾಹನ ಸಂಚಾರ ಬಂದ್ ಮಾಡಿ ಪ್ರತಿಭಟಿಸಿದರು.
ಹಿರೇಕೆರೂರ ಶಾಸಕ ಯು.ಬಿ.ಬಣಕಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾನೂನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯಪಾಲರು ನಿಯಮ ಬಾಹಿರವಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಯಾರು ಎಷ್ಟೇ ಷಡ್ಯಂತ್ರ ಮಾಡಿದರೂ ಸಫಲರಾಗುವುದಿಲ್ಲ. ಬದಲಾಗಿ ಅವರ ವರ್ಷಸ್ಸು ಮತ್ತಷ್ಟು ಹೆಚ್ಚಾಗುತ್ತದೆ. ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯನವರು ಹಣಕಾಸಿನ ವಿಚಾರದಲ್ಲಿ ಎಂದಿಗೂ ತಪ್ಪು ಮಾಡಿಲ್ಲ. ಮುಡಾದಲ್ಲಿ ಕಾನೂನು ಪ್ರಕಾರ ಸೈಟು ಹಂಚಿಕೆ ಮಾಡಲಾಗಿದೆ. ಆದರೂ ಬಿಜೆಪಿ ಹಾಗೂ ಜೆಡಿಎಸ್‌ನವರು ವಿನಾಕಾರಣ ಸಂಚು ರೂಪಿಸಿ, ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರ ಪರವಾಗಿ ಹೋರಾಡಲು ನಾವು ಸದಾ ಸಿದ್ಧ ಎಂದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಆಗಮಿಸಿ ಶಾಸಕರಿಂದ ಮನವಿ ಪತ್ರ ಸ್ವೀಕರಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ರಾಣೆಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಸಚಿವ ಆರ್.ಶಂಕರ, ಮಾಜಿ ಶಾಸಕ ಅಜೀಮ್ ಪೀರ್ ಖಾದ್ರಿ, ಆನಂದಸ್ವಾಮಿ ಗಡ್ಡದೇವರಮಠ, ಎಸ್.ಆರ್.ಪಾಟೀಲ, ಕರ್ಜಗಿ ಬ್ಲಾೃಕ್ ಕಾಂಗ್ರೆಸ್ ಅಧ್ಯಕ್ಷ ಎಂ ಎಂ ಮೈದೂರ, ಹಾವೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಪ್ರಕಾಶಗೌಡ ಪಾಟೀಲ, ಯಾಸೀರ್‌ಖಾನ್ ಪಠಾಣ, ಪ್ರಸನ್ನ ಹಿರೇಮಠ, ಪ್ರೇಮಾ ಪಾಟೀಲ, ಸೇರಿದಂತೆ ನೂರಾರು ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.