ಜಿಲ್ಲೆ

ಕೈ ಸಮಾವೇಶಕ್ಕೆ ಜಿಲ್ಲೆಯಿಂದ 10 ಸಾವಿರ ಜನ; ಕಾಂಗ್ರೆಸ್ ಜಿಲ್ಲಾ ವಕ್ತಾರ ಡಾ.ಸಂಜಯ ಡಾಂಗೆ

ಹಾವೇರಿ: ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮೇ 20ರಂದು ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಸಾಧನಾ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲೆಯಿಂದ 7 ಸಾವಿರ ಫಲಾನುಭವಿಗಳೂ ಸೇರಿದಂತೆ 10 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ವಕ್ತಾರ ಡಾ.ಸಂಜಯ ಡಾಂಗೆ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ತಾಂಡಾ ಹಾಗೂ ಇತರ ಕಂದಾಯ ಗ್ರಾಮಗಳ 7 ಸಾವಿರ ಫಲಾನುಭವಿಗಳು ಸಮಾವೇಶಕ್ಕೆ ಹೊರಟಿದ್ದಾರೆ. ಹಾವೇರಿ ತಾಲೂಕಿನಿಂದ 1,338, ಹಾನಗಲ್ಲ 990, ಬ್ಯಾಡಗಿ 1,315, ಹಿರೇಕೆರೂರ 900, ರಾಣೆಬೆನ್ನೂರ 301, ಶಿಗ್ಗಾಂವಿ 430, ಸವಣೂರ ತಾಲೂಕಿನ 380 ಫಲಾನುಭವಿಗಳು ಸಮಾವೇಶದಲ್ಲಿ ಕಂದಾಯ ಇಲಾಖೆಯಿಂದ ಹಕ್ಕುಪತ್ರ ಪಡೆಯಲಿದ್ದಾರೆ ಎಂದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕೊಟ್ಟಿರುವ ಭರವಸೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಇದನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಗೃಹಜ್ಯೋತಿ ಯೋಜನೆಗೆ ಈವರೆಗೆ 14 ಸಾವಿರ ಕೋಟಿ ರೂ. ವ್ಯಯಿಸಲಾಗಿದೆ. ಗೃಹಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಇನ್ನೂ ಮೂರು ವರ್ಷದವರೆಗೆ ಬೇಕಾದಷ್ಟು ಹಣ ಸರ್ಕಾರದ ಬಳಿ ಇದೆ. ಸರ್ಕಾರದ ಸಾಧನೆ ಸಹಿಸಲು ಆಗದೇ ಜನಾಕ್ರೋಶ ಸಮಾವೇಶ ಮಾಡಿದರು. ಅದು ಯಶಸ್ವಿಯಾಗಲಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದರು.

ಇದು ಸಿದ್ದರಾಮೋತ್ಸವ ಚಾಪ್ಟರ್ 2 ಎಂದು ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ನೀರಲಗಿ, ಜನರಿಗೆ ಹಕ್ಕುಪತ್ರ ವಿತರಿಸುವುದು ಸಿಎಂ ಕನಸಿನ ಕೂಸು. ಹಾಗಾಗಿ, ಅಭಿಮಾನದಿಂದ ಹೇಳಿರಬಹುದು. ಅದರಲ್ಲಿ ತಪ್ಪೇನಿಲ್ಲ ಎಂದರು.

ಎಸ್‌ಎಫ್‌ಎನ್ ಗಾಜಿಗೌಡ್ರ, ಶಂಕರ ಮೆಹರವಾಡೆ, ಇತರರಿದ್ದರು.

140 ಬಸ್ ಮೂಲಕ ಪ್ರಯಾಣ

ಜಿಲ್ಲೆಯಿಂದ ಹೊಸಪೇಟೆ ಸಮಾವೇಶಕ್ಕೆ ತೆರಳಲು 140 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. 7,000 ಫಲಾನುಭವಿಗಳು, 3 ಸಾವಿರಕ್ಕಿಂತ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ ರಾಜ್ಯದ ಹಾಡಿ, ಹಟ್ಟಿ, ತಾಂಡಾಗಳ 1,11,111 ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. 4 ಲಕ್ಷಕ್ಕೂ ಅಧಿಕ ಜನರು, ಕಾರ್ಯಕರ್ತರು ಭಾಗವಹಿಸುವರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.