ಜಿಲ್ಲೆ

ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ; ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣ; ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ

ಹಾವೇರಿ: ಲೋಕಸಭಾ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ನಮ್ಮ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ. ಸೋತಾಗ ಅಪವಾದ ಸಾಮಾನ್ಯ. ಸೋಲಿನ ಹೊಣೆಯನ್ನು ಎಲ್ಲ ನಾಯಕರು ಹೊರುತ್ತೇವೆ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಅವಿರತವಾಗಿ ಶ್ರಮಿಸಿದ್ದಾರೆ. ಆದರೂ ಕಡಿಮೆ ಅಂತರದಿಂದ ಸೋತಿದ್ದೇವೆ. ನಾನು ಚುನಾವಣೆ ಸಂದರ್ಭದಲ್ಲಿ ಮಧ್ಯಂತರವಾಗಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದೆ. ಹಾಗಾಗಿ, ಸೋಲಿನ ಹೊಣೆ ಎಲ್ಲರೂ ಹೊರುತ್ತೇವೆ. ಸೋಲು ಒಪ್ಪಿಕೊಂಡಿದ್ದೇವೆ. ಯಾವುದೇ ರೀತಿ ವಿಚಲಿತರಾಗದೇ, ಮುಂದಿನ ಚುನಾವಣೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೇವೆ ಎಂದರು.
ನಿಮ್ಮದೇ ಪಕ್ಷದ ಕೆಲವರ ಹೊಂದಾಣಿಕೆಯಿಂದ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಬಲಿಪಶು ಮಾಡಲಾಯಿತೇ, ಎಚ್.ಕೆ.ಪಾಟೀಲರ ಮೇಲೆ ಪ್ರತಿ ಬಾರಿ ಹೊಂದಾಣಿಕೆ ಆರೋಪ ಕೇಳಿ ಬರುತ್ತದೆ, ಮಾನೆ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ ಪ್ರಶ್ನೆಗೆ ಉತ್ತರಿಸಿದ ನೀರಲಗಿ, ಬಲಿಪಶು ಅಂತೇನಿಲ್ಲ. ಕ್ಷೇತ್ರದ ಏಳು ಶಾಸಕರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಸೋತಾಗ ಅಪವಾದ ಸಾಮಾನ್ಯ. ಎಲ್ಲರೂ ಕೆಲಸ ಮಾಡಿದ್ದಾರೆ. ನಮ್ಮಲ್ಲೂ ಸಣ್ಣಪುಟ್ಟ ತಪ್ಪುಗಳಾಗಿವೆ. ಅಭ್ಯರ್ಥಿಗೆ ಎಲ್ಲರೂ ಸಾಂತ್ವನ ಹೇಳಿದ್ದೇವೆ ಎಂದರು.
ಜೂ.18ರಿಂದ ವಿಧಾನಸಭಾ ಕ್ಷೇತ್ರವಾರು ಆತ್ಮಾವಲೋಕನ ಸಭೆ ಕರೆಯಲಾಗಿದೆ. ಜೂ.18ರಂದು ಬೆಳಗ್ಗೆ 11 ಗಂಟೆಗೆ ರಾಣೆಬೆನ್ನೂರ, ಸಂಜೆ 4 ಗಂಟೆಗೆ ಹಾನಗಲ್ಲನಲ್ಲಿ ಸಭೆ ನಡೆಯಲಿದೆ. ಕಾಗಿನೆಲೆ ರಸ್ತೆಯ ಎಂಟು ಗುಂಟೆ ಜಾಗದಲ್ಲಿ ಸುಂದರವಾದ ಕಾಂಗ್ರೆಸ್ ಜಿಲ್ಲಾ ಕಚೇರಿ ಕಟ್ಟಡ ನಿರ್ಮಿಸಲು ಶೀಘ್ರದಲ್ಲೇ ಭೂಮಿಪೂಜೆ ಮಾಡಲಾಗುವುದು ಎಂದರು.