ಜಿಲ್ಲೆ

ಸ್ಮಾರ್ಟ್ ಸಿಟಿ, ಸೇಫ್ ಸಿಟಿ ಅನುಷ್ಠಾನಕ್ಕೆ ಪ್ರಯತ್ನ; ಹಾವೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ರುದ್ರಪ್ಪ ಲಮಾಣಿ ಹೇಳಿಕೆ

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರ ಹಾಗೂ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದ ‘ಸ್ಮಾರ್ಟ್‌ಸಿಟಿ- ಸೇಫ್ ಸಿಟಿ’ ಯೋಜನೆ ಅನುಷ್ಠಾನ ಮಾಡಲು ಪ್ರಯತ್ನ ನಡೆಸಿದ್ದೇನೆ. ಯಾವುದಾದರೂ ಖಾಸಗಿ ಏಜೆನ್ಸಿ ಮೂಲಕ ಹಾವೇರಿಯ ಸಮಗ್ರ ಅಭಿವೃದ್ಧಿಗೆ ಎಷ್ಟು ಅನುದಾನ ಬೇಕಾಗಬಹುದು ಎಂಬುದನ್ನು ಒಮ್ಮೆ ಅಂದಾಜು ಪಟ್ಟಿ ಸಿದ್ಧಪಡಿಸೋಣ ಎಂದು ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಮಾತು ಹಾಗೂ ಜನರ ಸಮಸ್ಯೆ ಕೇಳಿ ಕೇಳಿ ಒಮ್ಮೊಮ್ಮೆ ಈ ಊರಿಗೆ ನಾನು ಎಂಎಲ್‌ಎ ಆಗೇನಲ್ಲಪ್ಪಾ ಎಂದು ಅನಿಸುತ್ತದೆ. ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಲು ಇಲ್ಲಿನ ಜನಸಂಖ್ಯೆ ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳಿದರೂ, ವಿಶೇಷ ಪ್ರಕರಣ ಎಂದು ಪರಿಗಣಿಸಿ, ಜಿಲ್ಲಾ ಕೇಂದ್ರದ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ. ರಿಂಗ್‌ರಸ್ತೆ, ರಸ್ತೆ ಅಭಿವೃದ್ಧಿ ಸೇರಿದಂತೆ ಎಲ್ಲ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ಖಾಸಗಿ ಏಜೆನ್ಸಿ ಮೂಲಕ ಎಷ್ಟು ಕೋಟಿ ಹಣ ಬೇಕಾಗಬಹುದು ಎಂಬುದನ್ನು ಮೊದಲು ಲೆಕ್ಕೆ ಮಾಡಿಸಬೇಕಿದೆ ಎಂದರು.

ಕೆಯುಐಡಿಎಫ್‌ಸಿ ವತಿಯಿಂದ ನಗರದ ಒಳಚರಂಡಿ ಯೋಜನೆ ಹಮ್ಮಿಕೊಂಡಿದ್ದು ಅದರ ಸಮಸ್ಯೆ ಗಂಭೀರವಾಗಿದೆ. ಕೆಲಸ ಮಾಡದೇ ಬಿಲ್ ತೆಗೆದಿದ್ದಾರೆ. ಈ ಕುರಿತು ಜಂಟಿ ತನಿಖಾ ವರದಿ ಬಂದ ನಂತರ ಸೂಕ್ತ ತೀರ್ಮಾನ ಸಾಧ್ಯ. ಒಟ್ಟಾರೆ ನನ್ನ ಈ ಅವಧಿಯಲ್ಲೇ ನಗರದ 24/7 ನೀರು ನೀಡುವುದು ಮತ್ತು ಸಮರ್ಪಕ ಒಳಚರಂಡಿ ಯೋಜನೆ ಪೂರ್ಣಗೊಳಿಸುವುದು ನನ್ನ ಗುರಿ ಎಂದರು.

ಗೂಗಿಕಟ್ಟಿಯಲ್ಲಿ 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೈಟೆಕ್ ರಂಗಮಂದಿರ ನಿರ್ವಹಣೆ ಇಲ್ಲದೇ 3 ವರ್ಷದಿಂದ ಖಾಲಿ ಬಿದ್ದಿದೆ. ಅಲ್ಲಿ ಯಾರೋ ಶೆಡ್ ಹಾಕಿಕೊಂಡಿದ್ದಾರೆ. ಶೆಡ್ ತೆರವುಗೊಳಿಸಿ, ರಂಗ ಮಂದಿರ ಬಾಡಿಗೆಗೆ ಕೊಡಿ ಎಂದು ಸದಸ್ಯ ಬಸವರಾಜ ಬೆಳವಡಿ ಒತ್ತಾಯಿಸಿದರು. ಶಾಸಕ ರುದ್ರಪ್ಪ ಪ್ರತಿಕ್ರಿಯಿಸಿ, ಈ ಕುರಿತು ಐದು ಬಾರಿ ಟೆಂಡರ್ ಕರೆದರೂ ಒಬ್ಬನೇ ವ್ಯಕ್ತಿ ಅರ್ಜಿ ಹಾಕಿದ್ದಾನೆ. ಅವನೂ ಐದು ವರ್ಷಕ್ಕೆ ಕರಾರು ಒಪ್ಪಂದ ಕೇಳುತ್ತಿದ್ದಾನೆ. ಈ ಕುರಿತು ಚರ್ಚಿಸಿ ತೀರ್ಮಾನಿಸೋಣ ಎಂದರು.

ಸಭೆಯಲ್ಲಿ ನಗರಸಭೆ ಆಡಳಿತಾಧಿಕಾರಿ ಎಚ್.ಬಿ.ಚನ್ನಪ್ಪ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಇತರರಿದ್ದರು.

7 ಕೋಟಿ ಕರ ವಸೂಲಿಗೆ ಕರೆ

ನಗರದಲ್ಲಿನ ನೀರಿನ ಕರ 7 ಕೋಟಿ ರೂ. ಬಾಕಿ ಇದೆ. ಶ್ರೀಮಂತರನ್ನು ಬಿಟ್ಟು ಬಡವರಿಂದ ಒತ್ತಡ ಹಾಕಿ ವಸೂಲಿ ಮಾಡೋದು ಸರಿಯಲ್ಲ. ಎಲ್ಲರಿಂದಲೂ ಟ್ಯಾಕ್ಸ್ ವಸೂಲಿ ಮಾಡುವ ಕೆಲಸ ಆಗಬೇಕು. ಓಟಿಎಸ್ ಮೂಲಕ ನೀರಿನ ಕರ ವಸೂಲಿ ಮಾಡಿದರೆ ನಗರಸಭೆಗೆ ಹೆಚ್ಚಿನ ಆದಾಯ ಬರುತ್ತದೆ ಎಂದು ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸಲಹೆ ನೀಡಿದರು.

ಒತ್ತುವರಿ ತೆರವುಗೊಳಿಸಿ..

ವಿದ್ಯಾನಗರದಲ್ಲಿರುವ ರಸ್ತೆ ಹಾಗೂ ಪತ್ರಿಕಾ ಭವನದ ಎದುರಿನ ಜಾಗೆ ಒತ್ತುವರಿ ಆಗಿದೆ. ಈ ಪ್ರಕರಣ ಹೈಕೋರ್ಟ್‌ನಲ್ಲಿದೆ. ನಾವು ಸೂಕ್ತ ದಾಖಲೆ ಕೊಟ್ಟು ನಗರಸಭೆಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ನಗರಸಭೆ ಆಸ್ತಿಯಾಗಿದ್ದರೂ ಸುತ್ತಲೂ ಕಾಂಪೌಂಡ್ ಅಳವಡಿಸಲಾಗಿದೆ. ಅದನ್ನು ತೆರವುಗೊಳಿಸಿ ಪತ್ರಕರ್ತರ ಸಂಘಕ್ಕೆ ನೀಡಿದರೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲ ಆಗಲಿದೆ ಎಂದು ಸದಸ್ಯ ಗಣೇಶ ಬಿಷ್ಠಣ್ಣನವರ, ಬಸವರಾಜ ಬೆಳವಡಿ ಹೇಳಿದರು.