ಜಿಲ್ಲೆ

ಫುಟ್‌ಪಾತ್ ನುಂಗಿ ರಸ್ತೆಗೆ ಬಂದ ವ್ಯಾಪಾರ !; ಹಾವೇರಿಯಲ್ಲಿ ಪಾದಚಾರಿಗಳು, ವಾಹನ ಸಂಚಾರಕ್ಕೆ ಸಂಚಕಾರ; ರಸ್ತೆ ಮೇಲೆಯೇ ಎಲ್ಲೆಂದರಲ್ಲಿ ಪಾರ್ಕಿಂಗ್

ಕೇಶವಮೂರ್ತಿ ವಿ.ಬಿ. ಹಾವೇರಿ

ಜಿಲ್ಲಾ ಕೇಂದ್ರ ಹಾವೇರಿ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಹೊಸ ಹೊಸ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತಲೇ ಇವೆ. ಆದರೆ, ಸೂಕ್ತ ಫುಟ್‌ಪಾತ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಸಂಕಷ್ಟ ಎದುರಾಗಿದೆ/. ಕೆಲ ವ್ಯಾಪಾರಿಗಳು ಫುಟ್‌ಪಾತ್ ನುಂಗಿ ಇದೀಗ ರಸ್ತೆಗೆ ಬಂದಿದ್ದಾರೆ. ಇದು ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಫುಟ್‌ಪಾತ್‌ಗಳ ಮೇಲೆ ವ್ಯಾಪಾರಿಗಳು ಅದೆಷ್ಟರ ಮಟ್ಟಿಗೆ ಹಿಡಿತ ಸಾಧಿಸಿದ್ದಾರೆ ಎಂದರೆ, ಫುಟ್‌ಪಾತ್‌ಗಳು ಪಾದಚಾರಿಗಳಿಗಾಗಿ ನಿರ್ಮಿಸಲಾಗಿದೆ ಎಂಬ ವಿಷಯವೇ ಮರೆತಂತಿದೆ. ಫುಟ್‌ಪಾತ್ ಇರುವುದೇ ವ್ಯಾಪಾರ ಮಾಡಲು ಎಂಬಂತೆ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲ ವ್ಯಾಪಾರಿಗಳಂತೂ ಫುಟ್‌ಪಾತ್ ದಾಟಿ, ರಸ್ತೆ ಮೇಲೆ ವ್ಯಾಪಾರ ಚಟುವಟಿಕೆಗಳನ್ನು ರಾಜರೋಷವಾಗಿ ನಡೆಸುತ್ತಿದ್ದಾರೆ. ನಗರದ ಹಳೇ ಪಿಬಿ ರಸ್ತೆ, ಹಾನಗಲ್ಲ ರಸ್ತೆ, ಎಂಜಿ ರಸ್ತೆ, ಗುತ್ತಲ ರಸ್ತೆ, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ಗುರುಭವನ ರಸ್ತೆ, ಸೇರಿದಂತೆ ವಿವಿಧೆಡೆ ಫುಟ್‌ಪಾತ್‌ಗಳು ಮಾಯವಾಗಿವೆ. ರಸ್ತೆ ಮೇಲೆ ರಾಜಾರೋಷವಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ. ಇದನ್ನು ತಡೆಯಲು ಸಂಚಾರ ಪೊಲೀಸರಿಗೂ ಆಗುತ್ತಿಲ್ಲ. ಇದರಿಂದಾಗಿ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ವೃದ್ದರು, ಮಕ್ಕಳು ರಸ್ತೆಬದಿಗೆ ಓಡಾಡುವುದೇ ದುಸ್ಥರವಾಗಿದೆ. ಇನ್ನಾದರೂ ಪೊಲೀಸ್ ಇಲಾಖೆಮ ನಗರಸಭೆ ಜಂಟಿಯಾಗಿ ಮುತುವರ್ಜಿ ವಹಿಸಿ ಫುಟ್‌ಪಾತ್ ಅತಿಕ್ರಮಣ ತೆರವು ಹಾಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ರೂಪುರೇಷೆ ಸಿದ್ಧಪಡಿಸಬೇಕು. ಈ ಮೂಲಕ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಫುಡ್‌ಸ್ಟ್ರೀಟ್ ಸ್ಥಾಪನೆಯಾಗಲಿ

ಬೀದಿಬದಿ ವ್ಯಾಪಾರಿಗಳು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಏಕಾಏಕಿ ರಸ್ತೆಬದಿ ವ್ಯಾಪಾರ ಬಂದ್ ಮಾಡಿದರೆ, ಅವರ ಜೀವನಕ್ಕೂ ತೊಂದರೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಹಾವೇರಿ ನಗರಸಭೆ ವತಿಯಿಂದ ನಿರ್ದಿಷ್ಟ ಸ್ಥಳವೊಂದನ್ನು ಗುರುತಿಸಿ ಫುಡ್‌ಸ್ಟ್ರೀಟ್ ಮಾಡುವ ಕುರಿತು ಚಿಂತನೆ ನಡೆಸಲಾಗಿತ್ತು. ಈ ಬಗ್ಗೆ ಅಧ್ಯಕ್ಷೆ ಶಶಿಕಲಾ ಮಾಳಗಿ ಸ್ಥಳ ಪರಿಶೀಲನೆಯನ್ನೂ ಮಾಡಿದ್ದರು. ಆದರೆ, ಈವರೆಗೆ ಆ ಕಾರ್ಯ ಅಂತಿಮಗೊಂಡಿಲ್ಲ. ಶೀಘ್ರದಲ್ಲೇ ಆ ಕಾರ್ಯ ಪೂರ್ಣಗೊಳ್ಳಲಿ ಎಂಬುದು ಹಾವೇರಿ ನಾಗರಿಕರ ಆಶಯವಾಗಿದೆ.

ಬೆಳಗ್ಗೆ 9ರ ನಂತರ ಅನ್ ಲೋಡಿಂಗ್

ನಗರದ ಎಂಜಿ ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯೊಳಗೆ ರಸ್ತೆಬದಿ ಲಾರಿ, ಮಿನಿ ಟ್ರಕ್ ನಿಲ್ಲಿಸಿ ಲೋಡಿಂಗ್, ಅನ್ ಲೋಡಿಂಗ್ ಮಾಡದಂತೆ ಕ್ರಮ ಜರುಗಿಸಲಾಗುವುದು. ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮಾತ್ರ ಅವಕಾಶ ನೀಡಲಾಗುವುದು. ಈ ಕುರಿತು ಅಂತಿಮ ನಿರ್ಣಯ ಘೋಷಿಸಲಾಗುವುದು ಎಂದು ಜನವರಿಯಲ್ಲಿ ಸ್ಥಳ ಪರಿಶೀಲನೆ ವೇಳೆ ಎಎಸ್‌ಪಿ ಎಲ್.ವೈ.ಶಿರಕೋಳ ಭರವಸೆ ನೀಡಿದ್ದರು. ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದರಿಂದ ವ್ಯಾಪಾರಕ್ಕೂ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ.

ಅಕ್ರಮವಾಗಿ ಶೆಡ್ ನಿರ್ಮಾಣ

ನಗರದ ಹಲವೆಡೆ ಫುಟ್‌ಪಾತ್ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ಹಣ್ಣು, ಹೂವು, ಚಹಾ ಅಂಗಡಿ, ಇತರ ವ್ಯಾಪಾರ ಮಾಡಲಾಗುತ್ತಿದೆ. ಸ್ವಾತಿ ಹೋಟೆಲ್ ಬಳಿ ಪಾರ್ಕಿಂಗ್‌ಗಾಗಿ ಬಿಟ್ಟಿದ್ದ ಸ್ಥಳದಲ್ಲಿ ಕೆಲ ಹಣ್ಣಿನ ಅಂಗಡಿಗಳನ್ನು ಅಕ್ರಮವಾಗಿ ಆರಂಭಿಸಲಾಗಿದೆ ಎಂಬ ಆರೋಪವಿದೆ. ನಗರಸಭೆ ಹಾಗೂ ಪೊಲೀಸರು ಯಾರ ಒತ್ತಡಕ್ಕೂ ಮಣಿಯದೇ ನಗರದ ಅಂದ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಅತಿಕ್ರಮಣ ತೆರವುಗೊಳಿಸಿ, ಪಾದಚಾರಿಗಳು ಮತ್ತು ವಾಹನಗಳ ಓಡಾಟಕ್ಕೆ ಮುಕ್ತಗೊಳಿಸಬೇಕು ಎಂಬ ಕೂಗು ಕೇಳಿಬಂದಿದೆ.

ಕೋಟ್:  

ಹಾವೇರಿ ನಗರದಲ್ಲಿ ಫುಟ್‌ಪಾತ್ ಅತಿಕ್ರಮಣಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಅದರ ಪರಿಜ್ಞಾನವೂ ಯಾರಿಗೂ ಇಲ್ಲದಾಗಿದೆ. ಪಾರ್ಕಿಂಗ್ ಸಮಸ್ಯೆ ಹೇಳತೀರದಾಗಿದೆ. ಇದರಿಂದ ನಗರಸಭಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಫುಟ್‌ಪಾತ್ ಮತ್ತು ಪಾರ್ಕಿಂಗ್ ಸಮಸ್ಯೆಗೆ ನಗರಸಭೆ ಮತ್ತು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.

- ವೆಂಕಟೇಶ ಇಟಗಿ, ನಗರಸಭೆ ಮಾಜಿ ಸದಸ್ಯ, ಹಾವೇರಿ