ಜಿಲ್ಲೆ

ಬನಶಂಕರಿ ಕಾಲನಿ ಅಡ್ಡರಸ್ತೆಗಳ ಡಾಂಬರೀಕರಣ ಯಾವಾಗ ?; ಹಾವೇರಿಯಲ್ಲಿ ಬಡಾವಣೆ ನಿರ್ಮಾಣವಾಗಿ ಮೂರು ದಶಕವಾದರೂ ಚರಂಡಿ ಸಮಸ್ಯೆ ಜೀವಂತ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಇಲ್ಲಿನ ದೇವಗಿರಿ ರಸ್ತೆಯ ಶ್ರೀ ಬನಶಂಕರಿ ಕಾಲನಿ ನಿರ್ಮಾಣವಾಗಿ ಮೂರು ದಶಕಗಳೇ ಕಳೆದರೂ ಮುಖ್ಯರಸ್ತೆ ಒಂದನ್ನು ಬಿಟ್ಟರೆ ಕಾಲನಿಯ ಅಡ್ಡರಸ್ತೆಗಳು ಡಾಂಬರು, ಚರಂಡಿಗಳನ್ನೇ ಕಂಡಿಲ್ಲ. ಹೀಗಾಗಿ, ಇಲ್ಲಿನ ನಿವಾಸಿಗಳು ಅಡ್ಡರಸ್ತೆಗಳ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಯಾವಾಗ ಮಾಡುತ್ತೀರಿ ಎಂದು ನಗರಸಭೆಯನ್ನು ಪ್ರಶ್ನಿಸುತ್ತಿದ್ದಾರೆ.

1993ರಲ್ಲಿ ಬನಶಂಕರಿ ಕಾಲನಿ ನಿರ್ಮಾಣವಾಗಿದ್ದು, ಸದ್ಯ ನೂರಾರು ಮನೆಗಳು ನಿರ್ಮಾಣಗೊಂಡಿವೆ. ಮುಖ್ಯರಸ್ತೆ, ವಿದ್ಯುತ್ ಸಂಪರ್ಕ, ನಂತರ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆಯಾದರೂ 12, 15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇಲ್ಲಿರುವ 6 ಅಡ್ಡರಸ್ತೆಗಳು ಡಾಂಬರು ಕಾಣದೇ ಕಚ್ಚಾ ರಸ್ತೆಯಂತಾಗಿವೆ. ಬೇಸಿಗೆಯಲ್ಲಿ ಧೂಳು, ಗುಂಡಿಗಳಲ್ಲಿ ಓಡಾಡಬೇಕು. ಮಳೆಗಾಲದಲ್ಲಂತೂ ಇಲ್ಲಿ ಓಡಾಡಲು ಸಾಧ್ಯವಿಲ್ಲ. ಧೈರ್ಯ ಮಾಡಿ ಈ ರಸ್ತೆಗಳಲ್ಲಿ ಬೈಕ್ ತೆಗೆದುಕೊಂಡು ಹೋಗಿ ಹಲವರು ಬಿದ್ದು ಗಾಯಗೊಂಡ ಉದಾಹರಣೆಗಳಿವೆ.

ಇಲ್ಲಿನ ಮುಖ್ಯರಸ್ತೆ ಪಕ್ಕದಲ್ಲಿ ಪೇವರ್ಸ್‌ ಬೇಡ. ಬದಲಾಗಿ ಅಡ್ಡರಸ್ತೆಗಳನ್ನು ಮಾಡಿ ಎಂದು ಈ ಹಿಂದೆ ಸ್ಥಳೀಯರು ಒತ್ತಾಯಿಸಿದರೂ ಕೇಳದೇ ಅನಗತ್ಯವಾಗಿ ಪೇವರ್ಸ್‌ ಅಳವಡಿಸಲಾಯಿತು. ನಂತರ ರಸ್ತೆ ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆದಿಲ್ಲ. ಎಸ್‌ಸಿ,ಎಸ್‌ಟಿ ಸೇರಿದಂತೆ ಎಲ್ಲ ವರ್ಗದವರು ಇಲ್ಲಿ ವಾಸಿಸುತ್ತಿದ್ದು, ಏಳೆಂಟು ವರ್ಷಗಳಿಂದ ರಸ್ತೆ ನಿರ್ಮಿಸಲು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಈ ಬಗ್ಗೆ ಗಮನಹರಿಸಬೇಕು. ಈ ಕೂಡಲೇ ಅಡ್ಡರಸ್ತೆಗಳು ಹಾಗೂ ಚರಂಡಿಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು, ಶ್ರೀ ಬನಶಂಕರಿ ದೇವಸ್ಥಾನದ ಅರ್ಚಕ ಎಸ್.ಎಫ್ ಹಿರೇಮಠ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.