ಹಾವೇರಿ: ಕಳೆದ ಇಪ್ಪತ್ತೈದು ದಿನಗಳಿಂದ ಕಣ್ಣು ಮುಚ್ಚಿದ್ದ ನಗರದ ಹೃದಯ ಭಾಗ ಹೊಸಮನಿ ಸಿದ್ದಪ್ಪ ವೃತ್ತದ ಸಿಗ್ನಲ್‌ಗೆ ದುರಸ್ತಿ ಭಾಗ್ಯ ದೊರೆತಿದ್ದು, ‘ವಿಜಯವಾಣಿ’ ವರದಿಯಿಂದ ಎಚ್ಚೆತ್ತ ಸಂಚಾರ ಠಾಣೆ ಪೊಲೀಸರು ಒಂದೇ ದಿನದಲ್ಲಿ ಸಿಗ್ನಲ್ ದುರಸ್ತಿಗೊಳಿಸಿದ್ದಾರೆ.
ಸಿಗ್ನಲ್ ಬಂದ್ ಆಗಿದ್ದರಿಂದ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು. ಪಾದಚಾರಿಗಳಂತೂ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿತ್ತು. ಸಿಗ್ನಲ್ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರರ ಅವಧಿ ಪೂರ್ಣಗೊಂಡಿದ್ದ ಪರಿಣಾಮ 25 ದಿನಗಳಿಂದ ಯಾರೂ ಇತ್ತ ನೋಡಿರಲಿಲ್ಲ.
ಈ ಸಮಸ್ಯೆ ಕುರಿತು ‘ಕಣ್ಣು ತೆರೆಯದ ಟ್ರಾಫಿಕ್ ಸಿಗ್ನಲ್’ ಶೀರ್ಷಿಕೆಯಡಿ ಜು.31ರಂದು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚತ್ತ ಹಾವೇರಿ ಸಂಚಾರ ಠಾಣೆ ಪೊಲೀಸರು ಮರುದಿನವೇ (ಆ.1ರಂದು) ದುರಸ್ತಿಗೊಳಿಸಿದ್ದಾರೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಹೊಸಬರಿಗೆ ಗುತ್ತಿಗೆ
ಟ್ರಾಫಿಕ್ ಸಿಗ್ನಲ್‌ನ ಮದರ್ ಬೋರ್ಡ್ ದುರಸ್ತಿಯಲ್ಲಿತ್ತು. ಗುರುವಾರ ರಿಪೇರಿ ಮಾಡಲಾಗಿದ್ದು, ಸಿಗ್ನಲ್ ಕಾರ್ಯಾರಂಭ ಮಾಡಲಾಗಿದೆ. ಶಿವಮೊಗ್ಗದ ಕಾಂತರಾಜು ಎಂಬುವರಿಗೆ ಹಾವೇರಿ ಸಿಗ್ನಲ್ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ. ಎರಡು ವರ್ಷ ಇವರೇ ನಿರ್ವಹಿಸಲಿದ್ದಾರೆ ಎಂದು ಸಂಚಾರ ಠಾಣೆ ಪಿಎಸ್‌ಐ ಎನ್.ಆರ್.ಕಾಟೆ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.