ಜಿಲ್ಲೆ

ಪ್ರಾಚಾರ್ಯ ಸೇರಿ ಮೂವರ ಮೇಲೆ ಕ್ರಮ ಕೈಗೊಳ್ಳಿ; ಬ್ಯಾಡಗಿ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಮಕ್ಕಳ ಆಯೋಗದ ಸದಸ್ಯ ರಾಮತ್ನಾಳ ಸೂಚನೆ

ಹಾವೇರಿ: ಬ್ಯಾಡಗಿಯ ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಪ್ರಾಚಾರ್ಯ, ವಾರ್ಡನ್ ಹಾಗೂ ಸ್ಟಾಫ್ ನರ್ಸ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಬ್ಯಾಡಗಿಯ ವಸತಿ ಶಾಲೆಯ ಬಾಲಕಿ ರೇಖಾ ಗೌಡರ್ ಆತ್ಮಹತ್ಯೆ ಪ್ರಕರಣದಲ್ಲಿ ಬಾಲಕಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದೆ. ಆದರೆ, ದುರ್ದೈವದ ಸಂಗತಿ ಎಂದರೆ, ಆ ಶಾಲೆಯ ಪ್ರಾಚಾರ್ಯರು, ವಾರ್ಡನ್ ಹಾಗೂ ಸ್ಟಾಫ್ ನರ್ಸ್ ಆ ವಿದ್ಯಾರ್ಥಿಯೊಂದಿಗೆ ಮಾತನಾಡಿಲ್ಲ. ಹಾಗಾಗಿ, ಆಯೋಗದಿಂದ ನೋಟಿಸ್ ನೀಡಲಾಗುವುದು ಹಾಗೂ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಹಿರೇಕೆರೂರ ಹಾಗೂ ಬ್ಯಾಡಗಿ ತಾಲೂಕಿನ ವಸತಿ ನಿಲಯದ ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಕಳವಳಕಾರಿ ಸಂಗತಿಯಾಗಿವೆ. ಇಂತಹ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸಿವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ತನಿಖೆ ನಡೆಯುತ್ತಿದ್ದು, ತನಿಖೆ ನಂತರ ಸತ್ಯಾಂಶ ಹೊರಬರಲಿದೆ. ಮಂಗಳವಾರ ಬ್ಯಾಡಗಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪಾಲಕರಿಗೆ ಸಾಂತ್ವನ ಹೇಳಲಾಗಿದೆ. ಐದು ಲಕ್ಷ ರೂ. ಪರಿಹಾರವನ್ನು ಪಾಲಕರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ, ಆರ್.ಟಿ.ಇ. ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು. ಸಿಸಿಟಿವಿ ಕ್ಯಾಮರಾ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಮಾಹಿತಿಯನ್ನು 15 ದಿನದೊಳಗಾಗಿ ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಮಕ್ಕಳ ರಕ್ಷಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಜವಾಬ್ದಾರಿ ಮಾತ್ರವಲ್ಲ, ಭಾಗಿದಾರರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು. ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವವಹಿಸುವ ಎಲ್ಲರೂ ಮಕ್ಕಳ ರಕ್ಷಣಾ ನೀತಿ-2016ರನ್ನು ತಿಳಿಸಿದುಕೊಳ್ಳಬೇಕು. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಡಿವೈಎಸ್‌ಪಿ ಎಂ.ಎಸ್.ಪಾಟೀಲ, ಇತರರು ಉಪಸ್ಥಿತರಿದ್ದರು.
ದಾಳಿಗಳ ಮಾಹಿತಿ ನೀಡಿ :
ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾದ ಹಾಗೂ ಪ್ರತಿನಿಧಿ ಸರಿಯಾಗಿ ಮಾಹಿತಿ ನೀಡದ ಕಾರಣ, ಕಾರ್ಮಿಕ ಇಲಾಖೆಯಿಂದ ಈವರೆಗೆ ಜಿಲ್ಲೆಯಲ್ಲಿ ಎಷ್ಟು ದಾಳಿ ಮಾಡಲಾಗಿದೆ? ದಾಳಿಗಳಲ್ಲಿ ಪತ್ತೆಯಾದ ಮಕ್ಕಳ ಸಂಖ್ಯೆ, ಪ್ರಕರಣಗಳ ಸಂಖ್ಯೆ ಎಷ್ಟು ಎಂಬಿತ್ಯಾದಿ ವರದಿಯೊಂದಿಗೆ ಆಯೋಗಕ್ಕೆ ಸೆ.25ರೊಳಗಾಗಿ ಸಲ್ಲಿಸುವಂತೆ ಸೂಚಿಸಿದರು.
54 ಬಾಲ ಗರ್ಭಿಣಿಯರು:
ಜಿಲ್ಲೆಯಲ್ಲಿ ಏಪ್ರಿಲ್ 1ರಿಂದ ಈವರೆಗೆ 54 ಬಾಲ ಗರ್ಭಿಣಿಯರು ಇರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಪೈಕಿ ಎಷ್ಟು ಪ್ರಕರಣಗಳಲ್ಲಿ ಎಂ.ಎಲ್.ಸಿ, ಎಷ್ಟು ಎಫ್‌ಐಆರ್ ದಾಖಲಿಸಲಾಗಿದೆ ಎಂಬುದನ್ನು ಸಭೆಗೆ ಸಲ್ಲಿಸಬೇಕು. ಆಧಾರ್ ಕಾರ್ಡ್ ವಯಸ್ಸಿನ ದೃಢೀಕರಣವಲ್ಲ. ಹಾಗಾಗಿ, ಜನನ ಪ್ರಮಾಣಪತ್ರ ಪರಿಗಣಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಂಡ್ ನೀಡಬೇಡಿ:
2016ರಿಂದ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ಬಂದಿದ್ದು, 2024ಕ್ಕೆ 18 ವರ್ಷಗಳಾಗಲಿದ್ದು, ಮಾರ್ಗಸೂಚಿ ಅನ್ವಯ 18 ವರ್ಷದೊಳಗಿನ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನಧಿಕೃತ ಕೋಚಿಂಗ್ ಸೆಂಟರ್ ಮೇಲೆ ನಿಗಾ :
ಅನುಮತಿ ಪಡೆದ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿರುವ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ತೀವ್ರ ನಿಗಾವಹಿಸಬೇಕು. ಇಂತಹ ಕೋಚಿಂಗ್ ಸೆಂಟರ್‌ಗಳಲ್ಲಿ ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ? ಹಾಗಾಗಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳಿಗೆ ತರಾಟೆ
ಕಳೆದ ಸಭೆಯಲ್ಲಿ ನೀಡಿದ್ದ ಸೂಚನೆಗಳ ಅನುಪಾಲನಾ ವರದಿಯನ್ನು ತರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆ ತೆದುಕೊಂಡ ಆಯೋಗದ ಸದಸ್ಯರು, ಮಕ್ಕಳು ನಿಮಗೆ ಸಂಬಂಧ ಇಲ್ಲವೇ ? ಕೆಲಸದಲ್ಲಿ ಇಷ್ಟು ಬೇಜವಾಬ್ದಾರಿ ಇರಬಾರದು. ಮಕ್ಕಳ ಸೌಲಭ್ಯಗಳ ಅನುಷ್ಠಾನದಲ್ಲಿ ತಾತ್ಸಾರ ಯಾಕೆ ? ಮುಂದಿನ ಸಭೆಗೆ ಕಡ್ಡಾಯವಾಗಿ ಅನುಪಾಲನಾ ವರದಿಯನ್ನು ತರಬೇಕು ಎಂದು ರಾಮತ್ನಾಳ ಎಚ್ಚರಿಕೆ ನೀಡಿದರು.