ಜಿಲ್ಲೆ

ಬಾಲ ಕಾರ್ಮಿಕ ಮುಕ್ತ ಜಿಲ್ಲೆಗೆ ಸಹಕರಿಸಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಎಡಿಸಿ ಡಾ.ನಾಗರಾಜ ಎಲ್. ಮನವಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಮಾಡುವುದು ಜಿಲ್ಲಾಡಳಿತದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಶ್ರಮಿಸೋಣ. ಇದಕ್ಕೆ ಎಲ್ಲ ಇಲಾಖೆಗಗಳು ಸೇರಿದಂತೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಮನವಿ ಮಾಡಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಕಡ್ಡಾಯ ಶಿಕ್ಷಣ ಜಾರಿಗೆ ತಂದಿದೆ. ಶಿಕ್ಷಣದಿಂದ ಮಹತ್ವದ ಬದಲಾವಣೆ ಸಾಧ್ಯ. ದೇಶದ ಆರ್ಥಿಕ ಬೆಳವಣಿಗೆಗೆ ಶಿಕ್ಷಣ ಸಹಕಾರಿಯಾಗಿದೆ. ಮಕ್ಕಳು ಬಾಲ್ಯಾವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಪಡೆಯುವ ಜತೆಗೆ ಶಿಕ್ಷಣವಂತರಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ ಮಾತನಾಡಿ, ಕೆಲಸಕ್ಕಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬರುವ ವಲಸೆ ಕಾರ್ಮಿಕರ ಮಕ್ಕಳಿಗೂ ಹತ್ತಿರದ ಶಾಲೆಗಳಲ್ಲಿ ದಾಖಲೆಮಾಡಿಕೊಂಡು ಶಿಕ್ಷಣ ನೀಡಲಾಗುತ್ತಿದೆ ಹಾಗೂ ವಲಸೆ ಕಾರ್ಡ್ ಸಹ ನೀಡಲಾಗುತ್ತಿದೆ. ಈ ವಲಸೆ ಕಾರ್ಡ್‌ನಿಂದ ಮುಂದೆ ಬೇರೆ ಸ್ಥಗಳಿಗೆ ಹೋದರೂ ಸಹ ಅಲ್ಲಿ ಈ ಕಾರ್ಡ್ ತೋರಿಸಿ ಶಾಲೆಗಳಿಗೆ ತೆರಳಬಹುದು ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಮಾತನಾಡಿ, 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. 18 ವರ್ಷದೊಳಗಿನ ಮಕ್ಕಳು ಶಾಲೆಯಲ್ಲಿರಬೇಕು. ಮಕ್ಕಳಿಗೆ ಬದುಕುವ, ರಕ್ಷಣೆ, ಭಾಗವಹಿಸುವಿಕೆ ಹಾಗೂ ವಿಕಾಸದ ಹಕ್ಕು ನೀಡಲಾಗಿದೆ. ಮಕ್ಕಳಿಗೆ ಎಲ್ಲ ಹಕ್ಕುಗಳು ದೊರೆತಾಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ, ಕಾಣೆಯಾದ ಹಾಗೂ ಶಾಲೆಯಿಂದ ಹೊರಗಳಿದ ಮಕ್ಕಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆಮಾಡಿ ಮಾಹಿತಿ ನೀಡಿದರೆ, ಅಂತಹ ಮಕ್ಕಳ ಸಮಸ್ಯೆ ಪರಿಹರಿಸಲಾಗುವುದು ಹಾಗೂ ಪುನರ್ವಸತಿ ಕಲ್ಪಿಸಲಾಗುವುದು. ಮಕ್ಕಳ ಸಹಾಯವಾಣಿ ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಎನ್.ಎನ್ ದಿಳ್ಳೆಪ್ಪನವರ ಅವರು ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ-2016 ಕುರಿತು ಹಾಗೂ ಮುತ್ತುರಾಜ ಮಾದರ ಬಾಲಕಾರ್ಮಿಕ ಪದ್ಧತಿಯ ಕಾರ್ಯ ವಿಧಾನ ಮತ್ತು ತಡೆಗಟ್ಟುವಿಕೆ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.

ಡಿವೈಎಸ್‌ಪಿ ಎಂ.ಎಸ್ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಹಾಗೂ ಕಾರ್ಮಿಕ ನಿರೀಕ್ಷಕ ಮಹಾಂತೇಶ ಹಿರೇಮಠ, ಇತರರು ಉಪಸ್ಥಿತರಿದ್ದರು. ದೀಪಾ ನಿರೂಪಿಸಿದರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರ ವಂದಿಸಿದರು.

ಪ್ರಶಸ್ತಿ ಪತ್ರ ವಿತರಣೆ: ಸಮಾರಂಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

1098ಗೆ ಕರೆ ಮಾಡಿ

ಪ್ರತಿಯೊಬ್ಬರೂ ಬಾಲ ಕಾರ್ಮಿಕ ಪದ್ಧತಿ ವಿರೋಧಿಸಬೇಕು. ಮಕ್ಕಳು ತಮ್ಮ ಹಕ್ಕುಗಳ ಮತ್ತು ಕಾಯ್ದೆ ಬಗ್ಗೆ ಅರಿವು ಹೊಂದಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕೈಗಾರಿಕೆಗಳು, ಹೋಟೆಲ್, ಕಾರ್ಖಾನೆಗಳು ಇತರೆ ಸ್ಥಳಗಳಲ್ಲಿ ಬಾಲ ಕಾರ್ಮಿಕರು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆಮಾಡಿ ಅಂತಹ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಬೇಕು ಎಂದು ಎಡಿಸಿ ಡಾ.ನಾಗರಾಜ ಹೇಳಿದರು.

ಜಾಗೃತಿ ಜಾಥಾ

ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮತ್ತು ಜೆ.ಎಂ.ಎಫ್..ಸಿ. ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಭಾರ ಸದಸ್ಯ ಕಾರ್ಯದರ್ಶಿ ಬಿಪಿನ್ ಎಚ್.ಎಂ. ಚಾಲನೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್., ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಮ ಬೆಂಗಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ, ಮುಖ್ಯೋಪಾಧ್ಯಾಯೆ ಶೋಭಾ ಜಾಗಟಗೇರಿ, ಇತರರು ಭಾಗವಹಿಸಿದ್ದರು.