ರಾಣೆಬೆನ್ನೂರ: ತಾಲೂಕಿನ ಮೆಡ್ಲೇರಿ, ರಾಹುತನಕಟ್ಟಿ ಭಾಗದಲ್ಲಿ ರಾತ್ರಿ ಊರುಗಳಿಗೆ ನುಗ್ಗಿ ಕುರಿ ಮರಿ, ಆಕಳ ಕರುಗಳನ್ನು ಕೊಂದು ತಿಂದು ಪರಾರಿಯಾಗುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಮೆಡ್ಲೇರಿ ಸುತ್ತಮುತ್ತ ಗ್ರಾಮಗಳಿಗೆ ಹಗಲು ಹಾಗೂ ರಾತ್ರಿ ಸದ್ದಿಲ್ಲದೇ ನುಗ್ಗುತ್ತಿತ್ತು. ಮೆಡ್ಲೇರಿಯ ಕುರಿ ದಡ್ಡಿಯಲ್ಲಿದ್ದ 28 ಕುರಿಮರಿಗಳನ್ನು ಕೊಂದು ಹಾಕಿತ್ತು. ಕೆಲವನ್ನು ತಿಂದು, ಇನ್ನು ಕೆಲವನ್ನು ಹಾಗೆಯೇ ಬಿಟ್ಟು ಹೋಗಿತ್ತು. ರಾಹುತನಕಟ್ಟಿಯಲ್ಲಿ ಇತ್ತೀಚೆಗೆ ಕರುವೊಂದನ್ನು ಅರ್ದ ದೇಹ ತಿಂದು ಹೋಗಿತ್ತು.
ಹಾಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಮೆಡ್ಲೇರಿ ಹಾಗೂ ರಾಹುತನಕಟ್ಟಿಯಲ್ಲಿ ಎರಡು ಬೋನುಗಳನ್ನು ಇಡಲಾಗಿತ್ತು. ಇದೀಗ ರಾಹುತನಕಟ್ಟಿಯಲ್ಲಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯಕ್ಕೆ ಚಿರತೆ :
ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮೇಲಧಿಕಾರಿಗಳ ಸೂಚನೆಯಂತೆ ದೂರದ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ.