ಜಿಲ್ಲೆ

ಗಾರ್ಮೆಂಟ್ ಉದ್ಯಮಿಗೆ ವಂಚಿಸಿದ್ದ ಆರೋಪಿ ಬಂಧನ; ವಿದೇಶದ ಆರ್ಡರ್ ಹೆಸರಲ್ಲಿ 3 ಕೋಟಿ ರೂ. ಮೋಸ ಆರೋಪ

ಹಾವೇರಿ: ಜಿಲ್ಲೆಯ ಗಾಂರ್ಮೆಂಟ್ಸ್ ಉದ್ಯಮಿಯೊಬ್ಬರಿಗೆ ಆನ್‌ಲೈನ್ ಮೂಲಕ ವಿದೇಶದಲ್ಲಿ ಟಿ-ಶರ್ಟ್ ಮಾರಾಟದ ಆರ್ಡರ್ ಕೊಡಿಸುವುದಾಗಿ ನಂಬಿಸಿ 3 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ ಆರೋಪಿಯನ್ನು ಸೈಬರ್ ಮತ್ತು ಆರ್ಥಿಕ ಅಪರಾಧ (ಸಿಇಇಎನ್) ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಮಯೂರ ವಿಹಾರ ನಿವಾಸಿ, ಎಸ್-ಸ್ಕ್ವೇರ್ ಎಕ್ಸ್‌ಪೋರ್ಟ್ ಕಂಪನಿ ಮಾಲೀಕ ಅಜರ್‌ಖಾನ್ ಮಜರ್‌ಖಾನ್ ಬಂಧಿತ ಆರೋಪಿ.

ಜಿಲ್ಲೆಯ ಬಂಕಾಪುರದ ಪ್ರಭಂಜನ ಗಾರ್ಮೆಂಟ್ಸ್ ಮಾಲೀಕರನ್ನು ಸಂಪರ್ಕಿಸಿದ್ದ ಆರೋಪಿ, ವಿದೇಶದಲ್ಲಿ ಟಿಶರ್ಟ್ ಮಾರಾಟದ ಆರ್ಡರ್ ಕೊಡಿಸುವುದಾಗಿ ತಿಳಿಸಿದ್ದ. ವಿದೇಶದ ಖರೀದಿದಾರರ ಸಂಪರ್ಕ ಕಲ್ಪಿಸಿ ನಂಬಿಕೆ ಹುಟ್ಟಿಸಿದ್ದ. ಇದಕ್ಕಾಗಿ ತಾನು 23 ಲಕ್ಷ ರೂ. ಶುಲ್ಕ ಪಡೆದಿದ್ದ. 3 ಕೋಟಿ ರೂ.ಗೂ ಅಧಿಕ ಮೌಲ್ಯದ ಟಿಶರ್ಟ್ ರವಾನಿಸಿದ್ದರು. ಆದರೆ, ಅವು ಖರೀದಿದಾರರನ್ನು ತಲುಪಿರಲಿಲ್ಲ. ಹಡಗಿನಲ್ಲಿ ಸಿಲುಕಿದ್ದವು. ಹೀಗಾಗಿ, ಗಾಮೆರ್ಂಟ್ ಮಾಲೀಕರು ಹಾವೇರಿ ಸಿಇಎನ್ ಠಾಣೆಯಲ್ಲಿ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.

ಎಸ್‌ಪಿ ಅಂಶುಕುಮಾರ, ಎಎಸ್‌ಪಿ ಲಕ್ಷ್ಮಣ ಶಿರಕೋಳ ಹಾಗೂ ಸಿಇಎನ್ ಠಾಣೆ ಪೊಲೀಸ್ ಉಪಾಧೀಕ್ಷಕಿ ಪ್ರಗ್ಯಾ ಆನಂದ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಶಿವಶಂಕರ ಗಣಾಚಾರಿ ಹಾಗೂ ತಂಡ ಆರೋಪಿಯನ್ನು ಬಂಧಿಸಿದೆ.

ಲುಕ್‌ಔಟ್ ನೋಟಿಸ್ ಜಾರಿ

ದುಬೈಗೆ ತೆರಳಿದ್ದ ಈತನ ಬಂಧನಕ್ಕೆ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ದುಬೈನಿಂದ ದೆಹಲಿಗೆ ಬರುತ್ತಿದ್ದಂತೆ ಏರ್‌ಪೋರ್ಟ್‌ನಲ್ಲಿ ಹಾವೇರಿ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.