ಹಾವೇರಿ: ದಿ.ಕಾರ್ಡಮಮ್ ಮರ್ಚಂಟ್ಸ್ ಕೋ-ಆಪ್ ಬ್ಯಾಂಕ್ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಹುಕ್ಕೇರಿಮಠ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೆ.8ರಂದು ಬೆಳಗ್ಗೆ 11 ಗಂಟೆಗೆ ಸುವರ್ಣ ಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಗಂಗಾಧರ ಮಳಗಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗಂಗಾಧರ ಬಸವರಾಜ ಮಳಗಿ ಅಧ್ಯಕ್ಷತೆ ವಹಿಸಲಿದ್ದು, ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಹಕಾರ ಇಲಾಖೆಯ ಉಪನಿಬಂಧಕ ಎ.ಯು.ಖಾನ್ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮಹಾಂತೇಶ ಸುರಳಿಹಳ್ಳಿ, ನಿರ್ದೇಶಕರಾದ ವಿರೂಪಾಕ್ಷಪ್ಪ ಬಣಕಾರ, ಅಶೋಕ ಮಹಾರಾಜಪೇಟ, ಮಹಾಂತಪ್ಪ ಮಾಸೂರ, ಮಲ್ಲಿಕಾರ್ಜುನ ಹಂದ್ರಾಳ, ಡಾ.ಸಿದ್ದೇಶ್ವರ ಬಾಲೆಹೊಸೂರ, ವಿರುಪಾಕ್ಷಪ್ಪ ಹತ್ತಿಮತ್ತೂರ, ವಿರೂಪಾಕ್ಷ ಹಾವನೂರ, ಕುಶಾಲ ನರಗುಂದ, ಹನುಮಂತಪ್ಪ ಹೊಸಮನಿ, ವ್ಯವಸ್ಥಾಪಕ ಮಹಾಂತಸ್ವಾಮಿ ಪ್ಯಾಟಿಮಠ, ಇತರರಿದ್ದರು.
ಬೆಳ್ಳಿ ನಾಣ್ಯ, ಇ-ಬ್ಯಾಂಕಿಂಗ್ ವ್ಯವಸ್ಥೆ
ಕಾರ್ಡಮಮ್ ಬ್ಯಾಂಕ್ ಸುಮಾರು 3,200 ಸದಸ್ಯರನ್ನು ಹೊಂದಿದ್ದು, ಸುವರ್ಣ ಮಹೋತ್ಸವ ಅಂಗವಾಗಿ ಎಲ್ಲ ಸದಸ್ಯರಿಗೆ ಬೆಳ್ಳಿ ನಾಣ್ಯಗಳನ್ನು ವಿತರಿಸುತ್ತಿದೆ. ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಲು ಇ ಬ್ಯಾಂಕಿಂಗ್ ಆ್ಯಪ್ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಗಂಗಾಧರ ಮಳಗಿ ತಿಳಿಸಿದರು.