ಹಾವೇರಿ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಹರಿದ ಪರಿಣಾಮ ವೃದ್ದೆಯೊಬ್ಬರ ಕಾಲು ತುಂಡಾದ ಅವಘಡ ಮಂಗಳವಾರ ಸಂಜೆ ಸಂಭವಿಸಿದೆ.
ತವರಮೆಳ್ಳಿಹಳ್ಳಿಯ ವೃದ್ದೆ ಬಸ್ ಗಾಗಿ ಕಾಯುತ್ತಿದ್ದರು. ಹಾವೇರಿ- ಸವಣೂರ ಮಧ್ಯೆ ಸಂಚರಿಸುವ ಬಸ್ ಹಿಂಬದಿ ಸಂಚರಿಸುವಾಗ ಅವಘಡ ಸಂಭವಿಸಿದೆ. ಕೂಡಲೇ ಅವರನ್ನು ಆಟೋ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದೆವು. ಹೆಚ್ಚಿನ ಚಿಕಿತ್ಸೆಗೆಂದು ವೈದ್ಯರು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಿದರು ಎಂದು ಪ್ರತ್ಯಕ್ಷದರ್ಶಿ ಪ್ರಕಾಶ ಕೋಳೂರ ತಿಳಿಸಿದ್ದಾರೆ.
22 ದಿನಗಳ ಹಿಂದೆ ನವೆಂಬರ್ 19ರಂದು ಇದೇಬಸ್ ನಿಲ್ದಾಣದಲ್ಲಿ ಬಸ್ ಹರಿದು ಎರಡೂ ಕಾಲು ಕತ್ತರಿಸಿ ತೀವ್ರವಾಗಿ ಗಾಯಗೊಂಡಿದ್ದ ಕನಕಾಪುರದ ರೈತ ಕರಿಯಪ್ಪ ಮುಚ್ಚಿಕೊಪ್ಪನವರ ಕಿಮ್ಸ್ ನಲ್ಲಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿರುವುದು ಇಲ್ಲಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.