ಹಾವೇರಿ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಹರಿದು ಎರಡೂ ಕಾಲು ತುಂಡರಿಸಿ ಗಂಭೀರವಾಗಿ ಗಾಯಗೊಂಡಿದ್ದ ರೈತ ಕರಿಯಪ್ಪ ಕಿಮ್ಸ್‌ನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಕನಕಾಪುರ ಗ್ರಾಮದ ರೈತ ಕರಿಯಪ್ಪ ಹನುಮಂತಪ್ಪ ಮುಚ್ಚಿಕೊಪ್ಪನವರ (66) ಮೃತಪಟ್ಟವರು.
ಬಸ್ ನಿಲ್ದಾಣದ ಪ್ರವೇಶ ದ್ವಾರದ ಕರಿಯಪ್ಪ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬಸ್ ಕರಿಯಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಮುಂದಿನ ಗಾಲಿ ಕರಿಯಪ್ಪನ ಎರಡೂ ಕಾಲುಗಳ ಮೇಲೆ ಹರಿದಿದೆ. ಪರಿಣಾಮ ಅವರ ಎರಡೂ ಕಾಲುಗಳು ತುಂಡರಿಸಿ, ತೀವ್ರವಾಗಿ ರಕ್ತಸ್ರಾವ ಆಗುತ್ತಿತ್ತು. ಬಸ್ ಚಾಲಕನ ನಿರ್ಲಕ್ಷೃದಿಂದ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಕರಿಯಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಕರಿಯಪ್ಪ ಅವರ ಎರಡೂ ಕಾಲುಗಳು ತುಂಡರಿಸಿ, ಎಲುಬುಗಳು ನಜ್ಜುಗುಜ್ಜಾಗಿದ್ದವು. ತೀವ್ರ ರಕ್ತಸ್ರಾವವಾಗಿ, ಆರೋಗ್ಯದಲ್ಲೂ ಏರುಪೇರಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿತ್ತು. ಕಿಮ್ಸ್‌ನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಮೃತಪಟ್ಟಿದ್ದಾರೆ ಎಂದು ಸಂಚಾರ ಠಾಣೆ ಪಿಎಸ್‌ಐ ಎನ್.ಆರ್.ಕಾಟೆ ತಿಳಿಸಿದರು.
ಚಾಲಕನ ನಿರ್ಲಕ್ಷೃದ ಚಾಲನೆಯಿಂದ ಬಸ್ ನಿಲ್ದಾಣ ಬಳಿ ಪದೇಪದೇ ಅಪಘಾತಗಳು ಉಂಟಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬಸ್ ನಿಲ್ದಾಣದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಕೆಲದಿನಗಳ ಹಿಂದೆಯಷ್ಟೇ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈಗ ಕರಿಯಪ್ಪಗೆ ಅಪಘಾತವಾಗಿದೆ. ಅಪಘಾತಗಳು ಸಂಭವಿಸದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬ ಚಾಲಕರಿಗೆ, ಎಚ್ಚರಿಕೆಯಿಂದ ಬಸ್ ಚಲಾಯಿಸುವಂತೆ ಕಠಿಣ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಿಂದಾಗಿ ಹಾನಗಲ್ಲ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಭೇಟಿ ನೀಡಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಅವರನ್ನು ಪ್ರತಿಭಟನಕಾರರ ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಬಂದ ಪೊಲೀಸ್ ಹಿರಿಯ ಅಧಿಕಾರಿಗಳು, ಬಸ್ ಚಾಲಕನ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕವೇ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.