ಹಾವೇರಿ: ಇಲ್ಲಿಯ ಮುರುಘ ರಾಜೇಂದ್ರ ನಗರದ ಬಳಿಯ ಚೌಡೇಶ್ವರಿ ನಗರದಲ್ಲಿ ಇತ್ತೀಚೆಗೆ ಸ್ವರರಾಗ ಸಂಗೀತ ಕಲಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಾಹಿತಿ ಸತೀಶ ಕುಲಕರ್ಣಿ ರಚನೆಯ ‘ಭೂಕಂಪ’ ನಾಟಕ ಪ್ರೇಕ್ಷಕರ ಮನ ಮಿಡಿಯುವಂತೆ ಮಾಡಿತು.
ನಿಸರ್ಗದ ಮೇಲೆ ಮನುಷ್ಯ ಸವಾರಿ ಮಾಡಿದರೆ, ನಿಸರ್ಗವೇ ಅವನನ್ನು ಸಮಾಧಿ ಮಾಡುತ್ತದೆ ಎಂಬ ಸಂದೇಶವನ್ನು ನಾಟಕ ಸಾರುತ್ತದೆ. ಜಮೀನ್ದಾರ ನಾಗಪ್ಪ ಹಳ್ಳಿಗರ ಮೇಲೆ ಸದಾ ಶೋಷಣೆ, ದೌರ್ಜನ್ಯ ಮಾಡುವಾಗ ಜೀತಗಾರ ಕೆಂಚಜ್ಜನ ಮೊಮ್ಮಗನನ್ನು ಜೀತಕ್ಕೆ ಕೇಳಿದಾಗ ಮೊಮ್ಮಗ ಮಂಜನೇ ಇಡೀ ವ್ಯವಸ್ಥೆ ವಿರುದ್ಧ ಹೋರಾಟ ಮಾಡುವುದು ನಾಟಕದ ಕಥೆಯಾಗಿತ್ತು.
ಮುಖ್ಯ ಪಾತ್ರದಲ್ಲಿ ಶಂಕರ ತುಮ್ಮಣ್ಣನವರ ತಮ್ಮ ಭಾವಪೂರ್ಣ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ನಾಗಪ್ಪನಾಗಿ ಕೆ.ಆರ್.ಹಿರೇಮಠ, ಕುಲಕರ್ಣಿ ಪಾತ್ರದಲ್ಲಿ ವಿರೇಶ ಶಂಕಿನಮಠ, ತಯಿಯ ಪಾತ್ರದಲ್ಲಿ ಶಶಿಕಲಾ ಅಕ್ಕಿ ಹಾಗೂ ಇತರ ಪಾತ್ರಧಾರಿಗಳಾದ ಶಿವರಾಜ ಪೂಜಾರ, ಭಾಗ್ಯ ಮತ್ತು ಜ್ಯೋತಿ ಅರ್ಕಸಾಲಿ ಅಭಿನಯಿಸಿದರು. ನಾಟಕದ ಹಿನ್ನೆಲೆಯ ಹಾಡುಗಳನ್ನು ಹನುಮಂತಪ್ಪ ಕರವಾಳಿ ಹಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಸತೀಶ ಕುಲಕರ್ಣಿ, ಹನುಮಂತಸಿಂಗ ರಜಪೂತ, ಮಾಲತೇಶ ಬಾರ್ಕಿ, ರುದ್ರಪ್ಪ ಜಾಬೀನ, ರಾಜು ತುಮ್ಮಣ್ಣನವರ, ಆಯಸ್ಕಾಂತ ಚಲನಚಿತ್ರದ ನಿರ್ಮಾಪಕ ನಿರ್ದೇಶಕರಾದ ವಿದ್ಯಾಧರನ್ ಮತ್ತು ಹಜರತ್, ಮತ್ತಿತರರು ಪಾಲ್ಗೊಂಡಿದ್ದರು.