ಜಿಲ್ಲೆ

ಮೂಲಸೌಲಭ್ಯವಿಲ್ಲದೇ ಸೊರಗಿದ ಸೋಮನಕಟ್ಟಿ; ದನಗಳಿಗೆ ನೀರು ಕುಡಿಯುಲು ತೊಟ್ಟಿ, ಚರಂಡಿ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕಿನ ಬೂದಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಕಟ್ಟಿ ಗ್ರಾಮ ಅಗತ್ಯ ಮೂಲಸೌಲಭ್ಯಗಳಿಲ್ಲದೇ ಸೊರಗಿದೆ. ದನಗಳಿಗೆ ಕುಡಿಯುವ ನೀರಿನ ತೊಟ್ಟಿ, ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಮಾರು 500ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ರೈತರ ಸಂಖ್ಯೆ ಹೆಚ್ಚಾಗಿದೆ. ರೈತರ ಆರಾಧ್ಯದೈವ ದನ ಕರುಗಳಿಗೆ ನೀರು ಕುಡಿಸಲು ನೀರಿನ ತೊಟ್ಟಿ ನಿರ್ಮಿಸುವಂತೆ ಹಲವು ದಿನಗಳಿಂದ ರೈತರು ಮನವಿ ಮಾಡಿಕೊಂಡಿದ್ದಾರೆ. ನೀರಿನ ತೊಟ್ಟಿ ಇಲ್ಲದೇ ದನ ಕರುಗಳು ಪರದಾಡುತ್ತಿವೆ.

ಗ್ರಾಮದಲ್ಲಿ ಇತ್ತೀಚೆಗೆ ನಿರ್ಮಿಸಲಾದ ಚರಂಡಿ ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ. ಹಲವೆಡೆ ಅರ್ದಂಬರ್ದ ಕಾಮಗಾರಿ ಮಾಡಿ ಕೈಬಿಡಲಾಗಿದೆ. ಇದರಿಂದ ಕೊಳಚೆ ನೀರು, ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಇನ್ನೂ ಹಲವೆಡೆ ಚರಂಡಿಯನ್ನೇ ನಿರ್ಮಿಸಿಲ್ಲ. ಇದರಿಂದ ಕೊಳಚೆ ನೀರು ಚರಂಡಿಯಲ್ಲೇ ನಿಂತು, ರೋಗಗಳಿಗೆ ಆಹ್ವಾನ ನೀಡುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಂಚಾಯಿತಿಗೆ ಬಂದ ಯೋಜನೆಗಳು ಜನರನ್ನು ಸರಿಯಾಗಿ ತಲುಪುತ್ತಿಲ್ಲ. ಪಂಚಾಯಿತಿಯಲ್ಲಿ ಗ್ರಾಮಸಭೆ ಸೇರಿದಂತೆ ಯಾವುದೇ ಸಭೆಗಳು, ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕೇವಲ ದಾಖಲೆಗಳಲ್ಲಿ ಕಾರ್ಯಕ್ರಮಗಳನ್ನು ತೋರಿಸುವ ಅಧಿಕಾರಿಗಳ ನಿರ್ಲಕ್ಷೃದಿಂದ ಸೋಮನಕಟ್ಟಿ ಗ್ರಾಮ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ.

ಈ ಸಮಸ್ಯೆಗಳ ಕುರಿತು ಸೆಪ್ಟೆಂಬರ್ 2024ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಪತ್ರ ನೀಡಲಾಗಿತ್ತು. ಈವರೆಗೆ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಗ್ರಾಮದ ಸಮಸ್ಯೆಗಳಿಗೆ ಮುಕ್ತಿ ಕೊಡಬೇಕು. ಗ್ರಾಪಂ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮದ ರೈತ ಸುರೇಶ ಹನುಮಗೌಡ್ರ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.