ಜಿಲ್ಲೆ

ನಾರಾಯಣ ಗುರುಗಳ ಪ್ರೇರಣೆ ಅದ್ವೈತ ಸಿದ್ದಾಂತ; ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿಕೆ

ಹಾವೇರಿ: ಶಿಕ್ಷಣದ ಬಗ್ಗೆ ವಿಶೇಷ ಆಸ್ಥೆ ವಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಅದ್ವೈತ ಸಿದ್ದಾಂತವನ್ನು ಬೆಳೆಸಿಕೊಂಡವರು. ಅವರ ಎಲ್ಲ ಸಾಮಾಜಿಕ ಸುಧಾರಣೆಯ ಹಿಂದೆ ಇಂತಹುದೇ ಪ್ರೇರಣಾ ಶಕ್ತಿ ಇತ್ತು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು.
ನಗರದ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಆರ್ಯ ಈಡಿಗ ಸಮಾಜದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೆಣ್ಣಿನ ಅನುಮತಿ ಪಡೆಯದೆ ಮದುವೆ ಮಾಡಬಾರದು ಹಾಗೂ ಮದುವೆ ಸರಳವಾಗಿ ನಡೆಯಬೇಕು. ಈ ಮೂಲಕ ಸರಳ ಬದುಕನ್ನು ಗುರುಗಳು ಪ್ರತಿಪಾದನೆ ಮಾಡಿದರು. ಕೇರಳದಲ್ಲಿ ಕಮ್ಯುನಿಸ್ಟರ ನಡುವೆ ಸನಾತನ ಸಂಸ್ಕೃತಿಯನ್ನು ಪಸರಿಸಿದ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲುತ್ತದೆ. ಕರಾವಳಿ ಭಾಗದಲ್ಲೂ ಬಡ ಜನರ ಉದ್ಧಾರಕ್ಕೆ ಅವರು ಭದ್ರ ಬುನಾದಿ ಹಾಕಿಕೊಟ್ಟರು ಎಂದು ಹೇಳಿದರು.
ಸಮಾರಂಭದಲ್ಲಿ ಡಾ.ಪ್ರಣವಾನಂದ ಸ್ವಾಮೀಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜೀಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ. ಉಪ ತಹಸೀಲ್ದಾರ್ ಅಮೃತಗೌಡ ಪಾಟೀಲ, ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷ ಕಾಂತೇಶ ಈಳಿಗೇರ, ಸತೀಶ ಈಳಿಗೇರ, ಉಪನ್ಯಾಸಕ ಡಾ.ಎಂ.ಓಬಲೇಶ, ಇತರರು ಪಾಲ್ಗೊಂಡಿದ್ದರು.