ಬೊಮ್ಮನಹಳ್ಳಿ: ಲೋಕಸಭೆ ಅಧಿವೇಶನದ ಭಾಷಣದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ದಲಿತ ಸಂಘಟನಾ ಸಮಿತಿಯ ಭೀಮ ಘರ್ಜನೆ ಸಂಘಟನೆ ಆಗ್ರಹಿಸಿದೆ.
ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು. ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ ತಮಟೆ ಭಾರಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಸಂಘಟನೆಯ ಅಧ್ಯಕ್ಷ ತಿರಕಪ್ಪ ಚಿಕ್ಕೇರಿ ಮಾತನಾಡಿ, ಅಮಿತ್ ಶಾ ಅವರಿಗೆ ಸಂವಿಧಾನ ಬೇಕಾಗಿಲ್ಲ. ಇಂಥವರು ಸಂವಿಧಾನದ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು. ಅವರ ಸದಸ್ಯತ್ವ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಗಂಗಾಧರ ಕುರಿದೂರ, ತಾಲೂಕಾಧ್ಯಕ್ಷ ಉಮೇಶ ಮಾಳಗಿ, ವಿಷ್ಣು ತಳಗೇರಿ, ಮಂಜುನಾಥ ಹರಿಜನ, ನಾಗರಾಜ ಭಜಂತ್ರಿ, ಮಹದೇವಪ್ಪ ಹರಿಜನ, ಬಸವರಾಜ ಮಣ್ಣೊಡ್ಡರ, ಮಂಜುನಾಥ ಮಣಕೋಡ್ಕರ, ಪರಶುರಾಮ ಜೋಗೇರ, ಮಹಾಂತೇಶ ವಡ್ಡರ, ಹನಮಂತಪ್ಪ ಸವಣೂರ, ಷಣ್ಮುಖ ಮಣ್ಣೊಡ್ಡರ, ಮಲ್ಲೇಶಪ್ಪ ಬೆಂಡಿಗೇರಿ, ಮಲ್ಲನಗೌಡ ಪಾಟೀಲ, ನಾಗಪ್ಪ ಬಿದರಗಡ್ಡಿ, ಶಂಬಣ್ಣ ಕ್ಯಾಲಕೊಂಡ, ಬಸನಗೌಡ ಪಾಟೀಲ, ಚಂದ್ರು ಹರಿಜನ, ಇತರರು ಪಾಲ್ಗೊಂಡಿದ್ದರು.