ಜಿಲ್ಲೆ

ದಲಿತ ಸಮಾಜಕ್ಕೆ ನ್ಯಾಯ ನೀಡಿದ ಬೊಮ್ಮಾಯಿ ಬೆಂಬಲಿಸಿ; ಜಾಗೃತಿ ಸಭೆಯಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಕರೆ

ಹಾವೇರಿ: ಮಾದರ ಸಮುದಾಯಕ್ಕೆ ಒಳ ಮೀಸಲಾತಿ ನೀಡುವ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ಈ ವಿಚಾರದಲ್ಲಿ ಸಾಕಷ್ಟು ಪರ ವಿರೋಧಗಳಿದ್ದವು. ಯಾವುದೇ ವಿರೋಧವನ್ನು ಲೆಕ್ಕಿಸದೇ ದಲಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ಧಿಟ್ಟ ನಿರ್ಧಾರವನ್ನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿಯವರು ತೆಗೆದುಕೊಂಡರು ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ದಲಿತ ಸಮುದಾಯದ ಮುಖಂಡರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ, ಐತಿಹಾಸಿಕ ನಿರ್ಧಾರ ತೆಗೆದುಕೊಂಡವರು ಬೊಮ್ಮಾಯಿ ಅವರು. ಅಲ್ಲದೇ ತಮ್ಮ ಅವಧಿಯಲ್ಲಿ ದಲಿತ ಸಮುದಾಯದ ಅಧಿಕಾರಿಗಳಿಗೆ ಉನ್ನತ ಸ್ಥಾನಗಳನ್ನು ನೀಡಿದ್ದರು. ಮಾದಾರ ಚನ್ನಯ್ಯ ಮಠಕ್ಕೆ ಬೆಂಗಳೂರಿನಲ್ಲಿ ಜಮೀನು ನೀಡಿ ದಲಿತ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ನಮ್ಮ ಸಮುದಾಯ ಯಾವುದೇ ಮುಜುಗರ ಇಲ್ಲದೇ ಬೊಮ್ಮಾಯಿ ಅವರನ್ನು ಬೆಂಬಲಿಸುವ ಮೂಲಕ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಕರೆ ನೀಡಿದರು.
ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್‌ನಿಂದ ಯಾವುದೇ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರೆತಿಲ್ಲ. ಎಸ್ಸಿ ಸಮುದಾಯಗಳಿಗೆ ಒಳಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತ ಬಂದಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತ ಸಮುದಾಯವನ್ನು ಮತಬ್ಯಾಂಕ್ ಮಾಡಿಕೊಂಡು ಸಮುದಾಯದ ಪ್ರಮುಖ ಬೇಡಿಕೆಯಾದ ಒಳ ಮೀಸಲಾತಿ ನೀಡದೇ ರಾಜಕಾರಣ ಮಾಡುತ್ತಿದೆ ಎಂದರು.
ಅನೇಕ ವರ್ಷಗಳಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಬೇಡಿಕೆ ಇದ್ದರೂ ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡದೇ ನಿರ್ಲಕ್ಷಿೃಸಿದ್ದರು. ನನ್ನ ಅವಧಿಯಲ್ಲಿ ಎಸ್ಸಿ ಸಮುದಾಯಕ್ಕೆ ಶೇ.15ರಿಂದ ಶೇ.17ರಷ್ಟು ಹೆಚ್ಚಳ ಮಾಡಿದ್ದೇನೆ. ಎಸ್ಟಿ ಸಮುದಾಯದ ಮೀಸಲಾತಿಯನ್ನು ಶೇ.3ರಿಂದ ಶೇ.7ರಷ್ಟು ಹೆಚ್ಚಳ ಮಾಡಿದ್ದೇನೆ. ನಾನೂ ಈ ಸಮುದಾಯದಲ್ಲಿ ಒಬ್ಬನಾಗಿ ಲೋಕಸಭೆಯಲ್ಲಿ ಈ ಸಮುದಾಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ, ಶಾಸಕ ಚಂದ್ರು ಲಮಾಣಿ, ದಲಿತ ಮುಖಂಡರು, ಮತ್ತಿತರರು ಇದ್ದರು.