ಹಾವೇರಿ: ಇನ್ನೊಬ್ಬರು ತಪ್ಪು ಮಾಡುತ್ತಾರೆ ಅಂತಾ ನೀವೂ ತಪ್ಪು ಮಾಡಲಿಕ್ಕೆ ಲೈಸನ್ಸ್ ಸಿಕಿದೆ ಎಂದು ಅರ್ಥವೇ ? ಮುಡಾ ಪ್ರಕರಣದಲ್ಲಿ ಹೈಕೋರ್ಟ್ ಹೊಸ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ಸಿದ್ದರಾಮಯ್ಯ ಅವರ ಇಮೇಜ್ ಉಳಿಸಿಕೊಳ್ಳಲು, ನೈತಿಕತೆ ಮೆರೆಯಲು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್‌ನವರು ಹೇಳುತ್ತಾರೆ ಅಂತ ಅಲ್ಲ. ತನಿಖೆಗೆ ಕೋರ್ಟ್ ಇದೆ. ವಿರೋಧ ಪಕ್ಷ ತನ್ನ ಕೆಲಸ ತಾನು ಮಾಡುತ್ತಿದೆ. ಸಿದ್ದರಾಮಯ್ಯ ಅವರ ವಿರುದ್ಧ ದೂರು ಬಂದಾಗಿನ ಸ್ಥಿತಿಗೂ, ರಾಜ್ಯಪಾಲರು ಒಪ್ಪಿಗೆ ಕೊಟ್ಟ ಬಳಿಕ ಸೆಷನ್ಸ್ ಕೋರ್ಟ್, ಹೈಕೋರ್ಟ್ ಗಮನಿಸಿದ ಬಳಿಕ ಬಹಳಷ್ಟು ವ್ಯತ್ಯಾಸ ಆಗಿದೆ. ಹೈಕೋರ್ಟ್ ಹೊಸ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ ಎಂದರು.
ಲೋಕಾಯುಕ್ತಕ್ಕೆ ಎಷ್ಟೇ ಸ್ವಾತಂತ್ರ್ಯ ಇದೆ ಅಂದರೂ ಹೈಕೋರ್ಟ್ ನಿರ್ದೇಶನವೂ ಇದೆ. ಲೋಕಾಯುಕ್ತದಲ್ಲಿ ನೇಮಕ ಆಗುವ ಎಲ್ಲ ಪೊಲೀಸ್ ಅಧಿಕಾರಿಗಳು ಎಡಿಜಿಪಿ, ಸಿಪಿಐ, ಪಿಎಸ್‌ಐ ಎಲ್ಲರೂ ಗೃಹ ಸಚಿವರು ಹಾಗೂ ಸಿಎಂ ಕಚೇರಿಯಿಂದಲೇ ನೇಮಕ ಆಗಿರುತ್ತಾರೆ. ನಿಮ್ಮ ನೈತಿಕತೆ ಎತ್ತಿ ಹಿಡಿಯಲು ತನಿಖೆಗೆ ಸಹಕರಿಸಿ ರಾಜೀನಾಮೆ ನೀಡಿ. ಮೂರು ತಿಂಗಳ ತನಿಖೆ ಬಳಿಕ ತಪ್ಪಿತಸ್ಥರಲ್ಲ ಅಂದರೆ ಮತ್ತೆ ಬೇಕಾದರೆ ಸಿಎಂ ಆಗಲು ಅವಕಾಶವಿದೆ ಎಂದು ಹೇಳಿದರು.
ಮುಡಾ ವಿಚಾರವಾಗಿ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಈಗ ಆಡಳಿತದಲ್ಲಿ ಇಲ್ಲ, ಈಗ ಮುಡಾ ವಿಚಾರವಾಗಿ ಬಂದಿದೆ. ಅವರು ವಕೀಲರಿದ್ದಾರೆ ತಿಳಿದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದರು.
ಶಿಗ್ಗಾವಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಘೋಷಣೆ ಕುರಿತು ಕೇಳಿದ ಪ್ರಶ್ನೆಗೆ 57 ಜನ ಆಕಾಂಕ್ಷಿಗಳು ಇಲ್ಲ. ಈಗಾಗಲೇ ಎರಡು ಸಭೆ ಮಾಡಿದ್ದೇವೆ. ಕೋರ್ ಕಮಿಟಿಯಲ್ಲೂ ಚರ್ಚೆ ನಡೆದಿದೆ. ನಾನು ಕೆಲವು ಪ್ರಮುಖರನ್ನು ಭೇಟಿ ಆಗುತ್ತಿದ್ದೇನೆ. ಎಲೆಕ್ಷನ್ ಘೋಷಣೆ ಆದ ಬಳಿಕ ಅಭ್ಯರ್ಥಿ ಘೋಷಣೆ ಆಗಲಿದೆ. ಮಾಜಿ ಸಚಿವ ಮುರುಗೇಶ ನಿರಾಣಿ ಹೆಸರು ಮಾಧ್ಯಮ ಸೃಷ್ಟಿ ಎಂದು ಹೇಳಿದರು.