ಜಿಲ್ಲೆ

ಮಕ್ಕಳಲ್ಲಿ ಮೂಢನಂಬಿಕೆ, ಜಾತೀಯತೆ ಹೊಡೆದೋಡಿಸಿ; ದೇವಗಿರಿಯ ಬಿಎಂಐಪಿ ಶಾಲಾ ವಾರ್ಷಿಕೋತ್ಸವ ಸಮಾರಂಭ; ಡಿಸಿ ದಾನಮ್ಮನವರ ಕಿವಿಮಾತು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮಕ್ಕಳಿಗೆ ಸಾಮಾಜಿಕ ಸಮಾನತೆಯ ಕುರಿತು ಅರಿವು ಮೂಡಿಸಿ. ಮುಖ್ಯವಾಗಿ ಮೂಢನಂಬಿಕೆ, ಜಾತೀಯತೆ, ಕೋಮುವಾದ, ಪ್ರಾದೇಶಿಕ ಅಸಮಾನತೆಯನ್ನು ಹೊಡೆದೋಡಿಸುವಂತೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಶಿಕ್ಷಕರು, ಪಾಲಕರಿಗೆ ಕಿವಿಮಾತು ಹೇಳಿದರು.

ಇಲ್ಲಿನ ದೇವಗಿರಿಯ ಬಿಎಂ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ, ಸಾಮರ್ಥ್ಯ ಇರುತ್ತದೆ. ಅದನ್ನು ಗುರುತಿಸಿ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅವರಿಗೆ ತಿಳಿಸಿ ಎಂದು ಕರೆ ನೀಡಿದರು.

ಕೆಎಲ್‌ಎಸ್ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ನಾಗರಾಜ ಮಾತನಾಡಿ, ಮಕ್ಕಳು ಶಾಲೆಗೆ ಬರುವಾಗ ಖುಷಿಯಿಂದ ಓಡೋಡಿ ಬರಬೇಕು. ಮನೆಗೆ ಹೋಗುವಾಗ ನಡೆದುಕೊಂಡು ಹೋಗಬೇಕು ಎಂಬ ಕನಸು ಹೊಂದಿದ್ದೆ. ಈ ಶಾಲೆಯ ಮೂಲಕ ಅದು ಈಡೇರಿದೆ. ಎಲ್ಲ ರೀತಿಯ ಚಟುವಟಿಕೆಗಳ ಮೂಲಕ ಶಾಲೆಯ ಮಕ್ಕಳನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಬೇಕು ಎಂಬ ಗುರಿಯೊಂದಿಗೆ ಎಲ್ಲ ಸಹಕಾರದೊಂದಿಗೆ ಮುನ್ನುಗ್ಗುತ್ತಿದ್ದೇವೆ ಎಂದರು.

2024-25ನೇ ಸಾಲಿನ ಬಿಎಂ ಎಕ್ಸಲೆಂಟ್ ಅವಾರ್ಡ್ ಅನ್ನು ತನುಶ್ರೀ ಕಲಕೋಟಿ ಅವರಿಗೆ ನೀಡಿ ಗೌರವಿಸಲಾಯಿತು.

ಪ್ರಾಂಶುಪಾಲ ಗಣೇಶ ಎಂ. ವಾರ್ಷಿಕ ವರದಿ ವಾಚಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಎಂ.ಆರ್.ಪೂಜಾರ 2025ನೇ ಶಾಲೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಶಿಕ್ಷಕಿಯರಾದ ಮೇರಿ ಎಲ್., ಮಮತಾ ತಡಪಟ್ಟಿ, ಕಾವ್ಯಾ ಆರ್.ಬಿ., ಸೌಮ್ಯ ಈಳಗೇರ, ಇತರರಿದ್ದರು.

ಕಣ್ಮನ ಸೆಳೆದ ಚಿಣ್ಣರ ನೃತ್ಯ

ಸಮಾರಂಭದಲ್ಲಿ ಶಾಲಾ ಮಕ್ಕಳು ವಿವಿಧ ಹಾಡುಗಳಿಗೆ ಆಕರ್ಷಕವಾಗಿ ನೃತ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಪ್ರೇಕ್ಷಕರ ಕಣ್ಮನ ಸೆಳೆಯಿತು.