ಜಿಲ್ಲೆ

ದೆಹಲಿ ತಾಪಮಾನ ಏರಿಕೆ ನಮಗೆ ಪಾಠವಾಗಬೇಕು; ಪರಿಸರ ದಿನಾಚರಣೆಯಲ್ಲಿ ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆ ಅಧ್ಯಕ್ಷ ನಾಗರಾಜ ಎಂ. ಸಲಹೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಶೇ.52ರಷ್ಟು ಉಷ್ಣಾಂಶ ದಾಖಲಾಗಿದ್ದು ಅಪಾಯಕಾರಿ ಸಂಗತಿಯಾಗಿದೆ. ಇದರಿಂದ ನಾವೆಲ್ಲರೂ ಪಾಠ ಕಲಿಯದಿದ್ದರೆ ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯ, ನಮ್ಮ ನಗರ ಹಾಗೂ ನಮ್ಮ ಊರುಗಳಿಗೂ ಇಂತಹ ಪರಿಸ್ಥಿತಿ ಬರುವ ಸಾದ್ಯತೆಗಳಿವೆ. ಆದ್ದರಿಂದ, ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಬಿಎಂ ಇಂಟರ್ ನ್ಯಾಶನಲ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಎಂ. ಸಂದೇಶ ಕೊಟ್ಟರು.
ಇಲ್ಲಿನ ಹಾವೇರಿ- ಹುಬ್ಬಳ್ಳಿ ಪಿಬಿ ರಸ್ತೆಯ ದೇವಗಿರಿ ಕ್ರಾಸ್ ಬಳಿ ಇರುವ ಬಿ.ಎಂ.ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ದಿನಮಾನದಲ್ಲಿ ಜಾಗತಿಕ ತಾಪಮಾನ ಏರಿಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ, ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತ ಮಾಡದೇ ವರ್ಷವಿಡೀ ನಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಲಾಲನೆ, ಪಾಲನೆ ಮಾಡಬೇಕು, ಪರಿಸರ ದಿನವನ್ನು ಹಬ್ಬದಂತೆ ಆಚರಿಸಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಗಣೇಶ ಎಂ., ಶಿವಕುಮಾರ ಹಿರೇಮಠ, ಶಿವಕುಮಾರ ಲಂಬಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
3 ಸಾವಿರ ಸಸಿ ಪೋಷಣೆ
ನಮ್ಮ, ಶಾಲಾ ಆವರಣದಲ್ಲಿ ಈವರೆಗೆ 3,000ಕ್ಕೂ ಅಧಿಕ ಸಸಿಗಳನ್ನು ನೆಟ್ಟು, ಪೋಷಿಸಲಾಗುತ್ತಿದೆ. ಇದರಲ್ಲಿ ಬೇವು, ಅಡಕೆ, ತೆಂಗು, ಮಹಾಗನಿ, ಸೇರಿದಂತೆ 52 ಜಾತಿಯ ಸಸಿಗಳನ್ನು ನೆಡಲಾಗಿದೆ ಎಂದು ನಾಗರಾಜ ಎಂ. ವಿವರಿಸಿದರು.