ಹಾವೇರಿ: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಹಾವೇರಿ ಜಿಲ್ಲೆಗೆ ನೂರಾರು ಕೋಟಿ ರೂ.ಯ ಹಲವು ಯೋಜನೆಗಳು ಹರಿದು ಬಂದವು. ಜಿಲ್ಲೆಯ ಅಭಿವೃದ್ಧಿಯಲ್ಲಿ ಇವರಿಬ್ಬರ ಕೊಡುಗೆ ಅಪಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೊಂಡಾಡಿದರು.
ನಗರದ ಶ್ರೀ ಶಿವಬಸವ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದೆ. ಆದರೆ, ಒಬ್ಬೇ ಒಬ್ಬ ಶಾಸಕ ಕನಿಷ್ಠ 50, 60 ಕೋಟಿ ರೂ. ಯೋಜನೆಯನ್ನು ತರಲು ಆಗಿಲ್ಲ. ತಂದಿದ್ದರೆ ಒಂದೇ ಒಂದು ಉದಾಹರಣೆ ಕೊಡಿ ಎಂದು ಸವಾಲು ಹಾಕಿದರು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಅನೇಕ ಕೆಲಸಗಳನ್ನು ಮಾಡಿದ್ದರೂ ಸಹ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ, ಈಗ ಜನರಿಗೆ ಗ್ಯಾರಂಟಿ ವಾಸ್ತವತೆಯ ಅರಿವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಏನಾಗಿದೆ. 2023ರಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರಿಗೆ 10 ಸಾವಿರ ಕೊಟಿ ರೂ. ಕೊಡುತ್ತೇವೆ ಎನ್ನುವ ಸಿದ್ದರಾಮಯ್ಯ ರೈತರಿಗೆ ಕೇವಲ 2,000 ಬರ ಪರಿಹಾರ ಘೋಷಿಸಿದ್ದು, ಅದನ್ನೂ ಸರಿಯಾಗಿ ಕೊಡುತ್ತಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ನಾಲ್ಕೂ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಬಿಜೆಪಿ ಗೆದ್ದಿದೆ. ಹಾವೇರಿ ಜಿಲ್ಲೆಯಾಗಲು ಸಿ.ಎಂ.ಉದಾಸಿಯವರು ಹೋರಾಡಿದರು. ಹತ್ತಾರು ವರ್ಷ ಕಳೆದರೂ ಅಭಿವೃದ್ಧಿ ಆಗಿರಲಿಲ್ಲ. ಬಿ.ಎಸ್.ಯಡಿಯೂರಪ್ಪನವರು ಸಿಎಂ ಆದ ಬಳಿಕ ಅಪ್ಪರ ತುಂಗಾ, ಏತ ನೀರಾವರಿಯಂತಹ ಅನೇಕ ಯೋಜನೆಗಳು ಜಿಲ್ಲೆಗೆ ಬಂದವು. ಜಿಲ್ಲೆಯ ಅಭಿವೃದ್ಧಿ ಏನಾದರೂ ಆಗಿದ್ದರೆ ಅದು ಬಿಜೆಪಿಯಿಂದ ಮಾತ್ರ. ಹಾಗಾಗಿ, ಮತ ಕೇಳುವ ನೈತಿಕ ಹಕ್ಕು ಇರುವುದು ಬಿಜೆಪಿಗೆ ಮಾತ್ರ ಇದೆ. ಐದನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಸಚಿವರಾದ ಬಿ.ಸಿ.ಪಾಟೀಲ, ಕಳಕಪ್ಪ ಬಂಡಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ, ಲಿಂಗರಾಜ ಪಾಟೀಲ, ಎನ್.ಎಲ್.ಕಲ್ಲೇಶ, ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಡಾ.ಫಕ್ಕೀರಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಜಗದೀಶ ಬಸೇಗೆಣ್ಣಿ, ಶರಣಬಸವ ಅಂಗಡಿ, ಪ್ರಭು ಹಿಟ್ನಳ್ಳಿ, ಇತರರಿದ್ದರು.
ಮನೆ ಮನೆಗೆ ಮೋದಿ
ಮನೆ ಮನೆಗೆ ಗಂಗೆ ಹೆಸರಲ್ಲಿ ಮೋದಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಕೊಡುತ್ತಿದ್ದಾರೆ. ವಿಶ್ವಕರ್ಮ ಯೋಜನೆ ಮೂಲಕ ಯುವಕರಿಗೆ ಶಕ್ತಿ ಕೊಟ್ಟಿದ್ದಾರೆ. ಇಂತಹ ಹಲವು ಯೋಜನೆಗಳಿಂದಾಗಿ ಮತ್ತೆ ಮೋದಿ ಅವರನ್ನು ಅಧಿಕಾರಕ್ಕೆ ತರಲು ದೇಶದ ಜನ ತೀರ್ಮಾನಿಸಿದ್ದಾರೆ. ರಾಜ್ಯದ ಜನತೆಗೂ ಕಾಂಗ್ರೆಸ್‌ನ ಮೋಸದ ಅರಿವಾಗಿದೆ. ನಮ್ಮ ಕಾರ್ಯಕರ್ತರು ಮೋದಿ ಅವರ ಕೊಡುಗೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲಿಸಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 130ರಿಂದ 140 ಸೀಟು ಗೆಲ್ಲಿಸಿ ಸರ್ಕಾರ ರಚಿಸುವ ಪಣ ತೊಟ್ಟಿದ್ದೇನೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಬಿ.ವೈ.ವಿಜಯೇದ್ರ ಕರೆ ನೀಡಿದರು.
ಕೋಟ್:
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚಾಲೆಂಜ್ ಮಾಡುತ್ತೇನೆ. ಸಂಪೂರ್ಣವಾಗಿ 200 ಯೂನಿಟ್ ವಿದ್ಯುತ್‌ಅನ್ನು ಯಾರಾದರೂ ಒಬ್ಬರಿಗಾದರೂ ಕೊಟ್ಟಿದ್ದರೆ ಅವರು ದಾಖಲೆ ಬಿಡುಗಡೆ ಮಾಡಲಿ. ಪ್ರಧಾನಿ ನರೇಂದ್ರ ಮೋದಿ ಅವರ ಅಕ್ಕಿಯ ಋಣದಲ್ಲಿರುವ ಸರ್ಕಾರ ಇದು. ಇಲ್ಲಸಲ್ಲದ ಸುಳ್ಳು ಇನ್ನುಮುಂದೆ ನಡೆಯಲ್ಲ. ಈ ದರಿದ್ರ ಸರ್ಕಾರ ತೊಲಗಬೇಕು.
ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ಕೋಟ್:
ಗ್ಯಾರಂಟಿಗೆ ಮರುಳಾಗಿ ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದಕ್ಕೆ ರಾಜ್ಯದ ಜನ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದ ಫೀಜ್ ಕಿತ್ತುಕೊಂಡು ಹೋಗಿದೆ. ಗಂಡನಿಂದ ಮೂರು ಸಾವಿರ ಕಿತ್ತುಕೊಂಡು, ಹೆಂಡತಿಗೆ ಎರಡು ಸಾವಿರ ಕೊಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ನಡೆಗೆ ಬೇಸತ್ತಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರದಲ್ಲಿ ಕೊಟ್ಟಿದ್ದ 50, 60 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನೂ ಈ ಸರ್ಕಾರ ವಾಪಸ್ ಪಡೆದುಕೊಂಡಿದೆ.
ಬಿ.ಸಿ.ಪಾಟೀಲ, ಮಾಜಿ ಸಚಿವ