ಜಿಲ್ಲೆ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ; ರೈತ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ; ಅನ್ನದಾತನ ನೆರವಿಗೆ ಧಾವಿಸಲು ಆಗ್ರಹ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತೀವ್ರ ಬರಗಾಲಕ್ಕೆ ತುತ್ತಾಗಿರುವ ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಕೈಬಿಡುವುದು, ರದ್ದುಗೊಳಿಸಿರುವ ರೈತಪರ ಯೋಜನೆಗಳನ್ನು ಮರುಜಾರಿಗೊಳಿಸುವುದು, ರೈತರ ಆತ್ಮಹತ್ಯೆಗಳನ್ನು ತಡೆಯುವುದು ಸೇರಿದಂತೆ, ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ನಗರದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
ಇಲ್ಲಿನ ಗುತ್ತಲ ರಸ್ತೆಯ ಪುರ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ರ‌್ಯಾಲಿ ಎಂಜಿ ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತ ತಲುಪಿತು. ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಹಸೀಲ್ದಾರ್ ಕಚೇರಿ ಸಿಬ್ಬಂದಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ರವಾನಿಸಿದರು.
ಶೇ.90ಕ್ಕೂ ಹೆಚ್ಚಿನ ರೈತರು ಬಿತ್ತನೆ ಮಾಡಿದ್ದು, ಮಳೆ ಇಲ್ಲದೆ ಬೆಳೆ ಒಣಗುತ್ತಿದೆ. ಮಳೆ ಕಣ್ಮರೆಯಾದ ಕಾರಣ ಕೆರೆ, ನದಿಗಳಲ್ಲಿನ ನೀರು ಖಾಲಿಯಾಗುತ್ತಿದೆ. ಅನಿಯಮಿತ ಲೋಡ್ ಶೆಡಿಂಗ್‌ಗಳ ಪರಿಣಾಮ ರೈತರ ಹೊಲಗಳಿಗೆ ನಿರಂತರವಾಗಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ ನಿಧಿ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು 42 ಜನ ರೈತರ ಆತ್ಮಹತ್ಯೆ ಪ್ರಕರಣಗಳ ವರದಿಯಾಗಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ಈ ಎಲ್ಲ ಅಂಶಗಳನ್ನು ಗಮನಿಸಿ ತಕ್ಷಣ ರೈತರ ನೆರವಿಗೆ ಧಾವಿಸಬೇಕು. ಹಗಲು ಹೊತ್ತಲ್ಲಿ 7 ಗಂಟೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ರೈತರ ಆತ್ಮಹತ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಹಾವೇರಿ ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕಳಸೂರ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಗ್ರಾಮೀಣ ಮಂಡಲದ ರೈತ ಮೋರ್ಚಾ ಅಧ್ಯಕ್ಷ ವಸಂತಗೌಡ ಪಾಟೀಲ, ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಗುರುಬಸವ ನವಲೆ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ ಚಿನ್ನಿಕಟ್ಟಿ, ಹನಮಂತಪ್ಪ ತಳವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಸೌಭಾಗ್ಯಮ್ಮ ಹಿರೇಮಠ, ಕೆ.ಸಿ.ಕೋರಿ, ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ವೀರಣ್ಣ ಅಂಗಡಿ, ಪ್ರಕಾಶ ಉಜನಿಕೊಪ್ಪ, ಮುತ್ತಯ್ಯ ಕಿತ್ತೂರಮಠ, ನಿರಜಂನ ಹೇರೂರ, ಚನ್ನಮ್ಮ ಬ್ಯಾಡಗಿ, ಪವಿತ್ರಾ ಹರಿಜನ, ಮತ್ತಿತರರು ಪಾಲ್ಗೊಂಡಿದ್ದರು.