ಜಿಲ್ಲೆ

ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಆಕ್ರೋಶ; ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ಅಮಾನತಿಗೆ ಆಗ್ರಹ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮುಖಂಡರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಭಾರತೀಯ ಜನತಾ ಪಕ್ಷದಿಂದ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ರ‌್ಯಾಲಿ ಎಂ.ಜಿ. ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ಸರ್ಕಲ್ ತಲುಪಿಸತು. ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟನೆ ನಡೆಸಲಾಯಿತು. ಅಪರ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಐವಾನ್ ಡಿಸೋಜಾ, ಜಮೀರ್ ಅಹ್ಮದ್, ಮತ್ತಿತರ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ವಜಾಗೊಳಿಸಲು ಆಗ್ರಹಿಸಲಾಯಿತು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಂವಿಧನಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಯವರ ಮೇಲೆ ರಾಜ್ಯಪಾಲರು ತನಿಖೆಗೆ ಆದೇಶ ನೀಡಿರುವುದು ಕಾನೂನು ಅನ್ವಯವಾಗಿದೆ. ಗುರುತರ ಆರೋಪ ಬಂದರೂ ಸಿಎಂ ರಾಜೀನಾಮೆ ನೀಡದಿರುವುದು ಖಂಡನೀಯ. ಕಾನೂನು ತಜ್ಞರೊಡನೆ ಸಮಾಲೋಚಿಸಿ, ಪ್ರಕರಣದ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಪರಾಮರ್ಶಿಸಿ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸುವುದು, ಅವರ ಪ್ರತಿಕೃತಿಯನ್ನು ಸುಡುವುದು ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ ಎಂದರು.
ಇಂತಹ ಕೃತ್ಯಗಳನ್ನು ಪೊಲೀಸರ ಸಮ್ಮುಖದಲ್ಲಿಯೇ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಮೇಲೆ ಕ್ರಮಕೈಗೊಳ್ಳದೇ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತಳೆದಿದೆ. ಇದಲ್ಲದೆ ಒಬ್ಬ ಪರಿಶಿಷ್ಟ ಜಾತಿಗೆ ಸೇರಿದ ರಾಜ್ಯಪಾಲರ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿ ನಿಂದನೆ ಕೇಸುಗಳನ್ನು ದಾಖಲಿಸಬೇಕಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಾಂಗ್ರೆಸ್ ನಾಯಕರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶವನ್ನು ಓಲೈಸುವ ರೀತಿಯಲ್ಲಿ ಮಾತನಾಡುತ್ತಿರುವುದು ದೇಶದ್ರೋಹಕ್ಕೆ ಸಮನಾಗಿದೆ. ಮುಖ್ಯಮಂತ್ರಿಗಳ ಮೇಲೆ ಬಂದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿರುವ ಅಧಿಕಾರ. ಇದು ಹಿಂದೆಯೂ ನಡೆದಿದೆ ಎಂದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರ ಹೇಳಿಕೆಗಳು ಸಂವಿಧಾನಕ್ಕೆ ಮತ್ತು ಪರಿಶಿಷ್ಟ ಜನಾಂಗಕ್ಕೆ ಮಾಡಿದ ಅವಮಾನ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಪ್ರತಿಭಟನೆ ಹಾಗೂ ಅವಹೇಳನಾಕಾರಿ ಹೇಳಿಕೆಗಳು ನಡೆಯುತ್ತಿದ್ದರೂ, ಪೊಲೀಸರು ಒಂದೂ ಪ್ರಕರಣ ದಾಖಲಿಸದಿರುವುದು ಹಲವು ಅನುಮಾನ ಮೂಡಿಸುತ್ತಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಭೋಜರಾಜ ಕರೂದಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸಿಮಗೌಡ್ರ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಾದಿಮನಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅಲ್ಲಾಭಕ್ಷ ತಿಮ್ಮಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ, ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.