ಹಾವೇರಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮೇಲೆ ರಾಜ್ಯ ಸರ್ಕಾರ ಇಲ್ಲಸಲ್ಲದ ಆರೋಪ ಹೊರಿಸಿ ಹಲ್ಲೆಗೆ ಯತ್ನಿಸಿದ್ದು ಖಂಡನೀಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಬಂಧನ ಖಂಡಿಸಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಸುವರ್ಣಸೌಧದ ಮೊಗಸಾಲೆಗೆ ನುಗ್ಗಿದ ಕಾಂಗ್ರೆಸ್ ಗೂಂಡಾ ಕಾರ್ಯಕರ್ತರು ಹಲ್ಲೆಗೆ ಮುಂದಾಗುತ್ತಾರೆ. ವಿಧಾನ ಪರಿಷತ್ ಸದಸ್ಯರಿಗೇ ಈ ರೀತಿ ಆದರೆ ಜನಸಾಮಾನ್ಯರ ಗತಿ ಏನು. ಏಕಾಏಕಿ ಬಂಧಿಸಿ ಅವರನ್ನು ಸ್ಥಳದಿಂದ ಸ್ಥಳಕ್ಕೆ ಪೊಲೀಸರು ಕರೆದುಕೊಂಡು ಹೋಗಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ರಾಜಕಾರಣದ ಕೊನೆಯ ನೀತಿ ಗುಂಡಾಗಿರಿಯನ್ನು ಕಾಂಗ್ರೆಸ್ ಪ್ರದರ್ಶಿಸುತ್ತಿದೆ. ಇದು ಭಯೋತ್ಪಾದನೆಗಿಂತ ಕೀಳುಮಟ್ಟದ ವರ್ತನೆಯಾಗಿದೆ.
ಈ ನಡವಳಿಕೆ ಸಂವಿಧಾನ ಬಾಹಿರವಾಗಿದ್ದು, ಇದನ್ನು ಗಮನಿಸಿದರೆ ಸಿ.ಟಿ.ರವಿ ಅವರನ್ನು ಕಾಂಗ್ರೆಸ್ ಪಕ್ಷವೇ ಕೊಲೆ ಮಾಡಲು ಸಂಚು ರೂಪಿಸಿರುವ ಅನುಮಾನ ಮೂಡುತ್ತದೆ. ಈ ಕೂಡಲೇ ಹಲ್ಲೆಕೋರರನ್ನು ಬಂಧಿಸಬೇಕು. ಅನುಚಿತವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ, ವೆಂಕಟೇಶ ನಾರಾಯಣಿ, ಸಂತೋಷ ಆಲದಕಟ್ಟಿ, ಮುರಗೆಪ್ಪ ಶೆಟ್ಟರ, ನಾಗೇಂದ್ರ ಕಟಕೋಳ, ಕೆ.ಶಿವಲಿಂಗಪ್ಪ, ಕಲ್ಯಾಣಕುಮಾರ ಶೆಟ್ಟರ, ಭಾರತಿ ಜಂಬಗಿ, ಸುರೇಶ ಹೊಸಮನಿ, ನಿಂಗಪ್ಪ ಗೊಬ್ಬೇರ, ಇತರರಿದ್ದರು.
ಬಾಣಂತಿಯರ ಸಾವು ಕಾಣಲಿಲ್ಲ
ರಾಜ್ಯ ಸರ್ಕಾರ ಬಾಂಣತಿಯರ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸುವರ್ಣಸೌಧದಲ್ಲಿ ಸಿಟಿ ರವಿ ಅವರ ಬಗ್ಗೆ ಸುಳ್ಳು ಆರೋಪ ಹೊರಿಸಿ ಗೊಂದಲ ಸೃಷ್ಟಿಸಿದೆ. ಇದರಲ್ಲೇ ಸರ್ಕಾರದ ದ್ವಂದ್ವ ನೀತಿನ ಗೊತ್ತಾಗುತ್ತದೆ. ಇದರ ಹಿಂದೆ ಷಡ್ಯಂತ್ರ ಅಡಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ ಎಂದು ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ ಆರೋಪಿಸಿದರು.