ಜಿಲ್ಲೆ

ಕರೊನಾ ಕಾಲದಲ್ಲೂ ಭಾರತ ಆರ್ಥಿಕ ಚೇತರಿಕೆ ಕಾಣುತ್ತಿದೆ; ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದ ಅಭಿವೃದ್ಧಿ; ಅರ್ಥಶಾಸ್ತ್ರಜ್ಞ ವಿಶ್ವನಾಥ ಭಟ್ಟ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಕರೊನಾ ಮಹಾಮಾರಿ ಕಾರಣದಿಂದ ಹಾಗೂ ಆರ್ಥಿಕತೆಯ ಕಳಪೆ ನಿರ್ವಹಣೆಯಿಂದ ಜಗತ್ತಿನ ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಹಲವು ರಾಷ್ಟ್ರಗಳು ಆರ್ಥಿಕ ದಿವಾಳಿ ಹಂತಕ್ಕೆ ತಲುಪಿವೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ, ಕಟ್ಟುನಿಟ್ಟಿನ ಆರ್ಥಿಕ ನಿರ್ವಹಣೆಯಿಂದ ಭಾರತ ಎಲ್ಲ ಸಂಕಷ್ಟಗಳನ್ನು ಎದುರಿಸಿ ಆರ್ಥಿಕವಾಗಿ ಅತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ ಎಂದು ಅರ್ಥಶಾಸ್ತ್ರಜ್ಞ ವಿಶ್ವನಾಥ ಭಟ್ಟ ಅಭಿಪ್ರಾಯಪಟ್ಟರು.
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ 9 ವಸಂತ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸೇವೆ- ಸುಶಾಸನ ಹಾಗೂ ಬಡವರ ಕಲ್ಯಾಣ ಅಭಿಯಾನದಲ್ಲಿ ಅವರು ಮಾತನಾಡಿದರು.
ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ, 11 ಕೋಟಿ ರೈತರಿಗೆ ಕಿಸಾನ್ ಸಮ್ಮಾನ ಯೋಜನೆಯಡಿಯಲ್ಲಿ ಪ್ರೋತ್ಸಾಹ ಧನ, ರೈತರ ರಸಾಯನಿಕ ಗೊಬ್ಬರದ ಮೇಲೆ ಎರಡೂವರೆ ಲಕ್ಷ ಕೋಟಿ ಸಬ್ಸಿಡಿ, ಯುವಕರಿಗೆ ಕೌಶಲ ಅಭಿವೃದ್ಧಿ ತರಬೇತಿ, ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ, ಸ್ಟಾರ್ಟ್ ಅಪ್‌ಗಳಿಗೆ ಪ್ರೋತ್ಸಾಹ ಧನ, ನೀರಾವರಿ ಯೋಜನೆಗಳಿಗೆ ಅನುದಾನ, 70 ಸಾವಿರ ಕೀ.ಮಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ದೇಶದ ರಕ್ಷಣಾ ವ್ಯವಸ್ಥೆಯನ್ನು ಅತ್ಯಂತ ಸದೃಡಗೊಳಿಸುವ ಮೂಲಕ ಸಮೃದ್ಧ, ಸುಭದ್ರ ಹಾಗೂ ಸ್ವಾವಲಂಭಿ ರಾಷ್ಟ್ರ ನಿರ್ಮಾಣಗೊಂಡಿದೆ. ಇದೇ ಕಾರಣಕ್ಕೆ ಜಗತ್ತು ಇಂದು ಭಾರತವನ್ನು ಅಚ್ಚರಿಯಿಂದ ನೋಡುವಂತಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾಗಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷವು ದೇಶ್ಯಾದ್ಯಂತ ಸಮರ್ಥನೆಗಾಗಿ ಸಂಪರ್ಕ ಅಭಿಯಾನದ ಅಡಿಯಲ್ಲಿ 10 ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಂ. ಸಾಲಿ, ಪ್ರಬುದ್ಧರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಬಸವರಾಜ ಹಾದಿಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ನೀಲಪ್ಪ ಚಾವಡಿ, ಮತ್ತಿತರರು ಉಪಸ್ಥಿತರಿದ್ದರು.