ಹಾವೇರಿ: ಪಕ್ಷದಲ್ಲಿ ಅವಿಶ್ವಾಸ ಹಾಗೂ ಗುಂಪುಗಾರಿಕೆ ಉಂಟಾಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ವಕ್ತಾರ ಮತ್ತು ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ನಿರಂಜನ ಹೆರೂರ ಬುಧವಾರ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ನಾನು 23 ವರ್ಷಗಳಿಂದ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ, ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಆದರೆ, ಇತ್ತೀಚಿನ ಪಕ್ಷದ ಆಂತರಿಕ ಗೊಂದಲಗಳಿಂದ ಮತ್ತು ಪಕ್ಷದಲ್ಲಿನ ಅವಿಶ್ವಾಸ ಮತ್ತು ಗುಂಪುಗಾರಿಕೆಯಿಂದ ಬೇಸತ್ತು ನನ್ನ ಹುದ್ದೆ ಮತ್ತು ಸದಸ್ಯತ್ವವನ್ನು ತ್ಯಜಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾಗಿ ಹೆರೂರ ತಿಳಿಸಿದ್ದಾರೆ.