ಮೊದಲ ಕ್ಯಾಬಿನೇಟ್‌ನಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಜನರಿಗೆ ಟೋಪಿ ಹಾಕಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಗ್ಯಾರಂಟಿಗೆ ಹಣಕಾಸು ಹೊಂದಿಸಲು ಆಗದೇ ಆರ್ಥಿಕ ದಿವಾಳಿಯತ್ತ ಸಾಗಿದೆ. ಐದೂ ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತಾರೆ ಎಂಬುದನ್ನು ಮುಖ್ಯಮಂತ್ರಿಯವರು ಈ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಮೋಸಗಾರರ ಸರ್ಕಾರವಾಗಿದ್ದು, ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಇವರ ಸುಳ್ಳು ಮಾತು ನಂಬಿ ಮತ ನೀಡಿದ ಜನರು ಈಗ ಪರಿತಪಿಸುತ್ತಿದ್ದಾರೆ. ಪ್ರತಿಭಟಿಸುತ್ತಿದ್ದಾರೆ. ಗ್ಯಾರಂಟಿ ಜಾರಿಗೊಳಿಸಲಾಗದ ಕಾಂಗ್ರೆಸ್, ಕೇಂದ್ರ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಹಿರಿಯರನ್ನು ಕಡೆಗಣಿಸಿದರ ಬಗ್ಗೆ ಬಹಿರಂಗವಾಗಿ ಹೇಳಲ್ಲ. ನಮ್ಮಲ್ಲೂ ಕೆಲ ತಪ್ಪುಗಳಾಗಿವೆ. ಈ ಬಗ್ಗೆ ಪಕ್ಷದ ಒಳಗೆ ಚರ್ಚಿಸಲಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರು ರಾಜೀನಾಮೆ ಕೊಟ್ಟಿಲ್ಲ. ಈ ಬಗ್ಗೆ ಅವರೇ ಸ್ಪಷ್ಟಪಡಿಸಿದ್ದಾರೆ. ‘ಸೋಲಿಗೆ ನಾನು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ’ ಎಂದಿದ್ದಾರೆ. ಅವರ ಸ್ಥಾನ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಬೋಜರಾಜ ಕರೂದಿ, ಗವಿಸಿದ್ದಪ್ಪ ದ್ಯಾಮಣ್ಣವರ, ಕರುಣಾಕರ ಕಾಸಳೆ, ಪ್ರಭು ಹಿಟ್ನಳ್ಳಿ, ಇತರರಿದ್ದರು.
ಮುಂಬರುವ ಚುನಾವಣೆಯಲ್ಲಿ ದಿಗ್ವಿಜಯ
ಬಿಜೆಪಿ ಕಾರ್ಯಕರ್ತರಿಗೆ ನಮ್ಮ ಸರ್ಕಾರ ಬರಲಿಲ್ಲ ಎಂಬ ನಿರಾಶೆ ಮೂಡಿದೆ. ಸೋಲು ನಮಗೆ ಹೊಸದೇನಲ್ಲ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಪಡೆದಿದ್ದೇವೆ. ಹಾಗಾಗಿ, ಕಾರ್ಯಕರ್ತರಿಗೆ ಯಾವುದೇ ಕಾರಣಕ್ಕೂ ನಿರಾಶೆ ಬೇಡ. ಮುಂಬರುವ ಜಿಪಂ, ತಾಪಂ ಹಾಗೂ ಲೋಕಸಭೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸುತ್ತೇವೆ. ಈ ನಿಟ್ಟಿನಲ್ಲಿ ಏಳು ತಂಡಗಳು ರಾಜ್ಯದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿವೆ ಎಂದು ಈಶ್ವರಪ್ಪ ಹೇಳಿದರು.