ಜಿಲ್ಲೆ

ಮೋದಿ ಪ್ರಧಾನಿಯಾದ ಬಳಿಕ ಸೈನಿಕರ ಬಲ ಹೆಚ್ಚಳ; ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ನಾಗರಾಜ ಇಚ್ಚಂಗಿ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತೀಯ ಸೈನ್ಯದ ಬಲ ಹೆಚ್ಚಿಸಿದರು. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಗಟ್ಟಿ, ಸೈನಿಕರು ದಿಟ್ಟತನದಿಂದ ಹೋರಾಡಲು ಅನುವು ಮಾಡಿಕೊಟ್ಟರು ಎಂದು ಮಾಜಿ ಸೈನಿಕ ನಾಗರಾಜ ಇಚ್ಚಂಗಿ ಹೇಳಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಂಡುಗಳ ಲೆಕ್ಕ ಕೇಳದೇ ಭಾರತೀಯ ಸೈನಿಕರಿಗೆ ಪೂರ್ಣ ಪ್ರಮಾಣದ ಅನುಮತಿ ನೀಡುವ ಮೂಲಕ ಆಮೂಲಾಗ್ರ ಬದಲಾವಣೆಯನ್ನು ಪ್ರಧಾನಿ ಮೋದಿ ದೇಶದಲ್ಲಿ ತಂದಿದ್ದಾರೆ ಎಂದರು. ತಮ್ಮ ಸೇನಾ ಅನುಭವವನ್ನು ಹಂಚಿಕೊಂಡರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಭಿಷೇಕ ಗುಡಗೂರ ಮಾತನಾಡಿ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಡೀ ದೇಶ ಶಾಂತಿಯಿಂದ ಮಲಗಲು ಆರ್ಮಿ ವೀರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಶೌರ್ಯ, ಧೈರ್ಯ ಮತ್ತು ಉತ್ಸಾಹದ ಕಥೆಗಳು ಜೀವನಕ್ಕಿಂತ ದೊಡ್ಡದಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ದಿಟ್ಟ ನಿರ್ಧಾರದಿಂದ ಈ ಕಾರ್ಗಿಲ್ ಯುದ್ದದಲ್ಲಿ ವಿಜಯವಾಯಿತು ಎಂದು ಹೇಳಿದರು.
ಮಾಜಿ ಸೈನಕರಾದ ನಾಗರಾಜ ಇಚ್ಚಂಗಿ ಮತ್ತು ರುದ್ರಪ್ಪ ದೇವಗಿರಿ ಅವರನ್ನು ಸನ್ಮಾನಿಸಲಾಯಿತು. ರುದ್ರೇಶ ಚಿನ್ನಣ್ಣನವರ ಮಾತನಾಡಿದರು.
ಪಂಜಿನ ಮೆರವಣಿಗೆ
ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಸಂಜೆ ಹಾವೇರಿ ನಗರದ ಗಾಂಧಿ ಸರ್ಕಲ್‌ನಲ್ಲಿ ಬಿಜೆಪಿಯಿಂದ ಪಂಜಿನ ಮೆರವಣಿಗೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಡಾ.ಸಂತೋಷ ಆಲದಕಟ್ಟಿ, ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಭರಡಿ, ಕೆ.ಬಿ.ಮಲ್ಲಿಕಾರ್ಜುನ, ಅಲ್ಲಾಭಕ್ಷ ತಿಮ್ಮಾಪೂರ, ಪ್ರಭು ಹಿಟ್ನಳ್ಳಿ, ನಿರಂಜನ ಹೇರೂರ, ನೀಲಪ್ಪ ಚಾವಡಿ, ಮಂಜುನಾಥ ಮಲಗೋಡ, ಅಭಿಷೇಕ ಬ್ಯಾಡಗಿ, ಸಚಿನ ಸಪ್ತಸಾಗರ, ರಾಹುಲ ನವಲೆ, ಸಂಕೇತ ಪಾಟೀಲ, ಪವನ ಕಜುರಕರ, ಹೊನ್ನಪ್ಪ ಅಗಿಸಿಬಾಗಿಲು, ಇತರರು ಪಾಲ್ಗೊಂಡಿದ್ದರು.