ಜಿಲ್ಲೆ

ಜಿಲ್ಲೆಯಲ್ಲಿ 21ರಂದು ಜನಾಕ್ರೋಶ ಯಾತ್ರೆ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿ ಮುಖಂಡರು ಭಾರಿ

ಹಾವೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಜನಾಕ್ರೋಶ ಯಾತ್ರೆ ಏ.21ರಂದು ಜಿಲ್ಲೆಗೆ ಆಗಮಿಸಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಪುರಸಿದ್ದೇಶ್ವರ ದೇವಸ್ಥಾನದಿಂದ ಯಾತ್ರೆ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ನಂತರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜನಾಕ್ರೋಶ ಯಾತ್ರೆಯ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾಕ್ರೋಶ ಯಾತ್ರೆಯಲ್ಲಿ 15 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬಿ.ಶ್ರೀರಾಮುಲು, ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳೋದೊಂದು ಮಾಡೋದೊಂದು ಆಗಿದೆ. ಎಲ್ಲ ವಸ್ತುಗಳ ಬೆಲೆ ಏರಿಸಿರುವ ಈ ಸರ್ಕಾರ ಯಾವಾಗ ತೊಲಗುತ್ತದೆಯೋ ಎಂದು ಜನ ಕಾಯುತ್ತಿದ್ದಾರೆ. ಹೆಣ್ಣುಮಕ್ಕಳು ಮಾಂಗಲ್ಯ ಉಳಿಸಿ ಎಂದು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್‌ನ ಭ್ರಷ್ಟ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ, ಹಿಂದುಳಿದವರು, ದೀನದಲಿತರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದಿಂದ ನೊಂದ ಪ್ರತಿಯೊಬ್ಬರು ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದರು.

ಬ್ಯಾಡಗಿಯ ಅತ್ಯಾಚಾರ ಕೇಸ್‌ನಲ್ಲಿ ಆರೋಪಿಗಳು ಕಾಂಗ್ರೆಸ್ ಪಕ್ಷದವರಿರಬೇಕು. ಹೀಗಾಗಿ ಎಫ್‌ಐಆರ್ ಹಾಕಲು ಹಿಂದೆ ಮುಂದೆ ನೋಡುತ್ತಾರೆ. ಶಾಸಕರು ಪ್ರಭಾವ ಬೀರಿರಬೇಕು ಎಂಬುದು ನನ್ನ ಭಾವನೆ. ಅವರಿಗೆ ಬೇಕಾದ ಸಮಾಜದವರು ಏನೇ ಮಾಡಿದರೂ ಮಾಫಿ ಅನ್ನುವಂತಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ,ಪರಮೇಶಪ್ಪ ಮೇಗಳಮನಿ, ವೆಂಕಟೇಶ ನಾರಾಯಣಿ, ಗಿರೀಶ ತುಪ್ಪದ, ಇತರರಿದ್ದರು.

ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವ

ರಾಜ್ಯ, ಜಿಲ್ಲೆಯಲ್ಲಿ ಸಂಪೂರ್ಣ ಆಡಳಿತ ಭ್ರಷ್ಟವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾಧಿಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಒಬ್ಬ ರೈತ ತನ್ನ ಜಮೀನಿಗೆ ಮಣ್ಣು ಹಾಕಿಸಿಕೊಂಡರೆ ಜಿಲ್ಲಾಧಿಕಾರಿಗಳು ಆತನಿಗೆ 30 ಸಾವಿರ ದಂಡ ಹಾಕಿಸಿದ್ದಾರೆ. ಮರಳು ಕಳ್ಳ ಸಾಗಾಣಿಕೆ ನಡೀತಿದೆ, ಪೊಲೀಸ್ ಠಾಣೆಗಳು ಅಕ್ರಮ ದಂಧೆಗಳಿಗೆ ಆಶ್ರಯ ನೀಡುವ ತಾಣಗಳಾಗಿವೆ ಎಂದು ಬಿ.ಸಿ ಪಾಟೀಲರು ಆರೋಪಿಸಿದರು.