ಜಿಲ್ಲೆ

ಕೇಂದ್ರದಿಂದ ಮಹಿಳೆಯರಿಗೆ ಭರಪೂರ ಕೊಡುಗೆ; ಬಿಜೆಪಿಗೆ ಮತ ಹಾಕುವಂತೆ ಹೆಂಗಳೆಯರಿಗೆ ನಟಿ ಶೃತಿ ಮನವಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಹಿಳೆಯರಿಗಾಗಿ ಉಜ್ವಲ, ಜನಧನ, ಜಲಜೀವನ ಮಿಷನ್, 5 ಕೆಜಿ ಅಕ್ಕಿ, ಬೇಟಿ ಬಚಾವೋ ಬೇಟಿ ಪಡಾವೋ, ಶೌಚಗೃಹ ನಿರ್ಮಾಣ, ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ, ಸೇರಿದಂತೆ ಅನೇಕ ಭರಪೂರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಹಾಗಾಗಿ, ಈ ಬಾರಿ ಮಹಿಳೆಯರು ತಾತ್ಕಾಲಿಕ ಗ್ಯಾರಂಟಿಗೆ ಮರುಳಾಗದೇ ಬಿಜೆಪಿಗೆ ಮತ ಹಾಕಬೇಕು ಎಂದು ಬಿಜೆಪಿ ತಾರಾ ಪ್ರಚಾರಕಿ, ನಟಿ ತಾರಾ ಮನವಿ ಮಾಡಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆಯೂ ಉದಾಸಿಯವರ ಪ್ರಚಾರ ಸೇರಿದಂತೆ ಈ ಭಾಗದಲ್ಲಿ ಹಲವು ಬಾರಿ ಬಂದಿದ್ದೇನೆ. ಬೆಂಗಳೂರಿನಲ್ಲಿ ಮತದಾನ ಕಡಿಮೆ ಆಗಿದೆ. ವಿದ್ಯಾವಂತ ಮತದಾರರು ಮತ ಹಾಕಬೇಕು. ಮತದಾನ ಮಾಡದೇ ಹೋದರೆ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ದೇಶಕ್ಕೆ ಮೋದಿ ನಾಯಕತ್ವ ಬೇಕು ಅಂತ ಜನರು ಬಯಸುತ್ತಿದ್ದಾರೆ. ದೇಶದ ಅಭಿವೃದ್ಧಿ ಮತ್ತು ರಕ್ಷಣೆಗೆ ಮೋದಿ ಅವಶ್ಯ ಎಂಬುದು ಜನರಿಗೆ ಮನದಟ್ಟಾಗಿದೆ. ಈ ಬಾರಿಯೂ ಬಿಜೆಪಿಗೆ ಉತ್ತಮ ವಾತಾವರಣ ಕಂಡುಬರುತ್ತಿದೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿ, ಸಿಎಂ ಆಗಿ ಈ ಭಾಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸಿಮೆಂಟ್ ರಸ್ತೆ, ನೀರಾವರಿ ಯೋಜನೆ, ಸೇರಿದಂತೆ ಅವರ ಸಾಧನೆ ನೋಡಿ ಜನರು ಆಶೀರ್ವಾದ ಮಾಡಬೇಕು. ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಲು ಉತ್ತಮ ಅವಕಾಶ ಅವರಿಗೆ ಸಿಕ್ಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡ್ರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಟಿ ಪಾಟೀಲ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ವಕ್ತಾರ ನಿರಂಜನ ಹೆರೂರ ಇದ್ದರು.
ಪ್ರಜ್ವಲ್ ಕೇಸ್ ತಲೆತಗ್ಗಿಸುವ ವಿಚಾರ
ಸಂಸದ ಪ್ರಜ್ವಲ ರೇವಣ್ಣ ಮೇಲಿನ ಆರೋಪ ಸಾಬೀತಾದರೆ ಖಂಡಿತವಾಗಿಯೂ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಲೇಬೇಕು. ನಿಜಕ್ಕೂ ಇದು ಎಲ್ಲರೂ ತಲೆತಗ್ಗಿಸುವ ವಿಚಾರ. ಇದನ್ನು ವೋಟಿನ ರಾಜಕಾರಣ ಮಾಡಿಕೊಳ್ಳುವುದು ತಪ್ಪು ಎಂದು ಶೃತಿ ಹೇಳಿದರು.