ಜಿಲ್ಲೆ

ಕಥೆಗಾರನಿಗೆ ಸೌಂದರ್ಯ ಪ್ರಜ್ಞೆ ಇರಬೇಕು; ಜಾನಪದ ವಿವಿ ವಿಸಿ ಡಾ.ಟಿ.ಎಂ.ಭಾಸ್ಕರ ಅಭಿಪ್ರಾಯ; ಬಿಂಬ-ಪ್ರತಿಬಿಂಬಗಳು ಪುಸ್ತಕ ಬಿಡುಗಡೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಕಥೆಗಾರನಿಗೆ ವಿಷಯ ಆಯ್ಕೆ ಅತಿ ಮುಖ್ಯ. ಕಥೆ ಹೇಳುವ ಸಂದರ್ಭಗಳು ಸೌಂದರ್ಯಪ್ರಜ್ಞೆಯಿಂದ ಕೂಡಿರಬೇಕು. ಜತೆಗೆ ಅಂತರ್ದೃಷ್ಟಿ ಹಾಗೂ ಲೋಕದೃಷ್ಟಿ ಸಂವೇದನೆ ಮೂಲಕ ಸಮಾಧಾನ ಭಾವದಿಂದ ಕಥೆ ಬರೆದವರು ಮಾತ್ರ ಕಥೆಗಾರ ಆಗಿ ಉಳಿಯಬಲ್ಲರು ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ ಅಭಿಪ್ರಾಯಪಟ್ಟರು.

ನಗರದ ಗೆಳೆಯರ ಬಳಗದ ಶಾಲಾ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಅರಳಿಕಟ್ಟಿ ಪ್ರಕಾಶನ ಹಾಗೂ ಸಾಹಿತಿ ಕಲಾವಿದರ ಬಳಗದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 'ಬಿಂಬ-ಪ್ರತಿಬಿಂಬಗಳು' ಕಥಾ ಸಂಪುಟ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾಷೆ, ಧರ್ಮ, ಜಾತಿ ಮೀರಿದ ಬರಹಗಾರ ಅದ್ಭುತ ಬರವಣಿಗೆ ಸೃಷ್ಟಿಸಬಲ್ಲ. ಬರಹಗಾರ ಸಮುದಾಯ ಪ್ರಜ್ಞೆಯ ಭಾವದೊಂದಿಗೆ ಸಾರ್ವತ್ರಿಕ ಸತ್ಯದ ವಿಷಯಕ್ಕೆ ಆದ್ಯತೆ ನೀಡಬೇಕು. ಸಾಹಿತಿಗಳಿಗೆ, ಹೋರಾಟಗಾರರಿಗೆ ಸ್ವಾಭಿಮಾನದ ಕಿಡಿ ಹೊತ್ತಿಸಿದ ಅಗ್ರಶ್ರೇಣಿಯಲ್ಲಿರುವ ಹಾವೇರಿ ಜಿಲ್ಲೆಯ ಸಾಹಿತ್ಯ ಲೋಕ ವಿಭಿನ್ನವಾದದ್ದು. ಈ ಹಿನ್ನೆಲೆಯಲ್ಲಿ ಉದಯೋನ್ಮುಖ ಬರಹಗಾರರು ಇತ್ತ ಲಕ್ಷ್ಯ ಕೊಡುವುದು ಅವಶ್ಯವಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಮಾತನಾಡಿದರು. ಕಥಾ ಸಂಪುಟದ ಕುರಿತು ಲೇಖಕ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿದರು.

ಡಾ.ಗುಹೇಶ್ವರ ಪಾಟೀಲ, ಗೂಳಪ್ಪ ಅರಳಿಕಟ್ಟಿ, ವಾಗೀಶ ಹೂಗಾರ ಹಾಗೂ ಸತೀಶ ಎಂ.ಬಿ. ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ, ವಿ.ಎಂ.ಪತ್ರಿ, ಮಾರುತಿ ಶಿಡ್ಲಾಪುರ, ಡಾ.ಮಲ್ಲಿಕಾರ್ಜುನ ಮಾನ್ಪಡೆ, ವಿ.ಪಿ.ದ್ಯಾಮಣ್ಣವರ, ಪರಿಮಳಾ ಜೈನ್, ಪೃಥ್ವಿರಾಜ ಬೆಟಗೇರಿ, ಜುಬೇದಾ ನಾಯಕ, ರೇಣುಕಾ ಗುಡಿಮನಿ, ರಾಜೇಂದ್ರ ಹೆಗಡೆ, ಚಂದ್ರಶೇಖರ ಮಾಳಗಿ, ಎಸ್.ಎಂ.ಬಡಿಗೇರ, ನೇತ್ರಾವತಿ ಅಂಗಡಿ, ಇತರರು ಉಪಸ್ಥಿತರಿದ್ದರು.

ಎಸ್.ಆರ್.ಹಿರೇಮಠ ಸ್ವಾಗತಿಸಿದರು. ಡಾ.ಜಗನ್ನಾಥ ಗೇನಣ್ಣವರ ನಿರೂಪಿಸಿದರು. ಕರಿಯಪ್ಪ ಹಂಚಿನಮನಿ ವಂದಿಸಿದರು.

ಕೋಟ್:

ನಮ್ಮ ಜಿಲ್ಲೆಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣೆಗೆ ಪ್ರಕಟಿಸಿರುವ ಬಿಂಬ-ಪ್ರತಿಬಿಂಬಗಳು ಕಥಾ ಸಂಪುಟಕ್ಕೆ ಮಾಡಿದ ಸಾಂಘಿಕ ಕೆಲಸ ಆಪ್ತತೆ ಹಾಗೂ ಸಂತೃಪ್ತ ಭಾವ ನೀಡಿದೆ. ಕಥೆಗಾರರು ಸಹಿತ ತಮ್ಮ ಕಥೆಗಳ ಮೂಲಕ ಭರವಸೆ ಮೂಡಿಸಿದ್ದಾರೆ.

- ಸತೀಶ ಕುಲಕರ್ಣಿ, ಹಿರಿಯ ಸಾಹಿತಿ

ವ್ಯಾಕರಣ ಬದ್ಧವಾಗಿ ಬರೆಯಬೇಕು

ಭಾಷೆಯನ್ನು ಬಳಸಿಕೊಳ್ಳುವ ಹಾಗೂ ದುಡಿಸಿಕೊಳ್ಳುವ ವಿಚಾರವನ್ನು ಉತ್ತರ ಕರ್ನಾಟಕ ಭಾಗದವರಿಗೆ ಹೇಳಿಕೊಡಬೇಕಿಲ್ಲ. ಆದರೆ ಕಥಾ ಸಂಪುಟದಲ್ಲಿ ಪ್ರತಿಬಿಂಬಗಳ ರೀತಿಯಲ್ಲಿ ಉದಯೋನ್ಮುಖ ಬರಹಗಾರರು ತಮ್ಮ ಭಾಷಾ ಕೌಶಲ ಹೆಚ್ಚಿಸಿಕೊಳ್ಳಬೇಕು. ವ್ಯಾಕರಣ ಬದ್ಧವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಕವಯತ್ರಿ ದೀಪಾ ಗೋನಾಳ ಸಲಹೆ ನೀಡಿದರು.