ಜಿಲ್ಲೆ

ಭೋವಿ ಶ್ರೀಗಳ ದೀಕ್ಷಾ ರಜತ ಮಹೋತ್ಸವ 20ರಂದು; ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ ಎಸ್.

ಹಾವೇರಿ: ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವ ಸಮಾರಂಭ ಜು.20ರಂದು ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ ಎಸ್. ಹೇಳಿದರು.
ಹಾವೇರಿ ಜಿಲ್ಲಾ ಭೋವಿ ವಡ್ಡರ ಸಮಾಜದರಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ದೀಕ್ಷಾ ರಜತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಉತ್ಸವದಲ್ಲಿ ಸ್ವಾಮೀಜಿಯವರ ಜನ್ಮದಿನವನ್ನು ರಾಷ್ಟ್ರೀಯ ಭೋವಿ ಜನೋತ್ಸವವನ್ನಾಗಿ ಆಚರಿಸಲಾಗುತ್ತಿದೆ. ನೂತನ ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಗುವುದು. ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ಸಮಾಜದ ಬೆಳವಣಿಗೆ ಕುರಿತು ಸಂವಾದ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ, ಸೇರಿದಂತೆ ಹತ್ತಾರು ಬಗೆಯ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಆಯೋಜಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸುವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಚನ ಧ್ವನಿಸುರಳಿ ಬಿಡುಗಡೆ ಮಾಡಲಿದ್ದಾರೆ. ಸಚಿವ ಶಿವರಾಜ ತಂಗಡಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮತ್ತಿತರರು ಪಾಲ್ಗೊಳ್ಳುವರು. ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಸಂಘದ ಜಿಲ್ಲಾಧ್ಯಕ್ಷ ರವಿ ಪೂಜಾರಿ ಮಾತನಾಡಿ, ಅಲೆಮಾರಿ ಹಾಗೂ ಅರೆಅಲೆಮಾರಿ ಲಕ್ಷಣಗಳನ್ನು ಹೊಂದಿರುವ ಭೋವಿ ಸಮುದಾಯವನ್ನು ಕಟ್ಟುವಲ್ಲಿ ಸ್ವಾಮೀಜಿಯವರ ಶ್ರಮ ಆಪಾರವಾದುದ್ದು. ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಿ ಸಮುದಾಯ ಸಂಘಟಿಸುತ್ತಿದ್ದಾರೆ. ಭಕ್ತರು ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸಬಾರದು. ಮಾಂಸ, ಹೆಂಡ, ಜೂಜು ಸಮುದಾಯವನ್ನು ಹಾಳು ಮಾಡುತ್ತಿದೆ. ಹಾಗಾಗಿ, ಬದಲಾವಣೆ ಹೊಂದಬೇಕು ಎನ್ನುವ ಮನವರಿಕೆಯನ್ನು ಮಾಡಿಕೊಡುವಲ್ಲಿ ಶ್ರೀಗಳು ನಿರಂತರವಾಗಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಭೋವಿ ವಡ್ಡರ ಸಂಘದ ಉಪಾಧ್ಯಕ್ಷ ಅರ್ಜುನ ಹಂಚಿನಮನಿ, ಸುರೇಶ ಸವಣೂರ, ಮಂಜು ವಡ್ಡರ, ನಿಂಗಣ್ಣ ಹೊಸರು, ದಾಸಪ್ಪ ಕರ್ಜಗಿ, ಹನುಮಂತಪ್ಪ ದೇವಗಿರಿ, ಪರಶುರಾಮ ಯಲವಿಗಿ, ದಿಯಾಮಣ್ಣ ಅರಸನಾಳ, ನಾಗರಾಜ ಮಲಗೊಡ, ಹನುಮಂತಪ್ಪ ಪೂಜಾರ, ರಮೇಶ ಸುತ್ತಕೊಟಿ, ಜಗದೀಶ ಸವಣೂರ, ಇತರರಿದ್ದರು.