ಹಾವೇರಿ: ಭಗವದ್ಗೀತೆಯು ಒಂದು ಬೆಳಕು ಇದ್ದಂತೆ. ನಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ ಭಗವದ್ಗೀತೆಯಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಸಂಗೀತಾ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶ್ರೀರಾಮ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮಾನವರನ್ನು ಮೃಗತ್ವದಿಂದ ಮಾನವೀಯತೆ ಎಡೆಗೆ ಒಯ್ಯುವ ಸಾಮರ್ಥ್ಯ ಭಗವದ್ಗೀತೆಗೆ ಇದೆ. ಅದರಲ್ಲಿನ ಸಾರವನ್ನು ಅರಿತು, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಭಿಯಾನದ ಗೌರವಾಧ್ಯಕ್ಷ ಪ್ರಭಾಕರ ರಾವ್ ಮಂಗಳೂರು ಅವರು ಅಭಿಯಾನ ಉದ್ಘಾಟಿಸಿ, ಪ್ರತಿಯೊಬ್ಬರು ಈ ಭಗವದ್ಗೀತಾ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಹಾವೇರಿ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಆರ್.ಪಾಟೀಲ ಮತ್ತು ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಸಂತ ಮೊಕ್ತಾಲಿ, ಭಗವದ್ಗೀತಾ ಅಭಿಯಾನದ ಜಿಲ್ಲಾ ಕಾರ್ಯಾಧ್ಯಕ್ಷ ಕಮಲಾಕರ ಹೆಗಡೆ, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಈ ವರ್ಷದ ಭಗವದ್ಗೀತಾ ಅಭಿಯಾನದ 10ನೇ ಅಧ್ಯಾಯವನ್ನು ಸಾಮೂಹಿಕವಾಗಿ ಪಠಿಸಲಾಯಿತು. ವಿಮಲಾ ಹೆಗಡೆ ಪ್ರಾರ್ಥಿಸಿದರು. ಸ್ವಾತಿ ಮಂಗಳೂರು ಸ್ವಾಗತಿಸಿದರು. ಪಿ.ಆರ್.ಭಾಗ್ಯಲಕ್ಷ್ಮೀ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಮೇಘಾ ಮೊಕ್ತಾಲಿ ವಂದಿಸಿದರು. ರಂಜನಾ ಭಟ್ ನಿರೂಪಿಸಿದರು.