ಜಿಲ್ಲೆ

ಭದ್ರಾ ಡ್ಯಾಂನಿಂದ ತುಂಗಭದ್ರೆಗೆ ಮತ್ತೆ ನೀರು 29ರಿಂದ; ನದಿ ಪಾತ್ರದಲ್ಲಿ ಸುತ್ತಾಟ, ಪಂಪ್‌ಸೆಟ್‌ನಿಂದ ನೀರು ಎತ್ತುವುದು ನಿಷೇಧ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲೆ ಒಳಗೊಂಡಂತೆ ತುಂಗಭದ್ರಾ ನದಿ ಆಶ್ರಿತ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸಲು ಭದ್ರಾ ಜಲಾಶಯದಿಂದ ಮಾ.29ರಿಂದ ನೀರು ಹರಿಸಲು ಅನುಮತಿ ದೊರೆತಿದೆ.
ಮಾ.29ರ ರಾತ್ರಿಯಿಂದ ಏಪ್ರಿಲ್ 6ರ ರಾತ್ರಿವರೆಗೆ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ಸ್‌ನಂತೆ (ಮಾ.6ರಂದು ಮಾತ್ರ 2,200) ಒಟ್ಟು ಒಂಭತ್ತು ದಿನ 23,200 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಬಿಡಲಾಗುತ್ತಿದೆ.
ಈ ಅವಧಿಯಲ್ಲಿ ನದಿ ಪಾತ್ರದಲ್ಲಿ ಸಾರ್ವಜನಿಕರು ಸುತ್ತಾಡುವುದು, ದನಕರುಗಳನ್ನು ನದಿಗೆ ಇಳಿಸುವುದು ಹಾಗೂ ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮೇಲಿನ ಅವಧಿಯಲ್ಲಿ ರೈತರು ನದಿ ದಂಡೆಯಲ್ಲಿ ಅಳವಡಿಸಿರುವ ಅನಧಿಕೃತ ಪಂಪ್‌ಸೆಟ್‌ಗಳಿಂದ ನೀರು ಎತ್ತುವುದನ್ನು ಸಹ ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಬಿ.ಆರ್.ಪ್ರಾಜೆಕ್ಟ್ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.