ಜಿಲ್ಲೆ

ಕಳ್ಳರ ಹಾವಳಿ ತಡೆಗೆ ಖಾಕಿಗೆ ಆಗ್ರಹ; ಬಸವೇಶ್ವರ ನಗರದ ಜನರಿಂದ ಪ್ರತಿಭಟನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಇಲ್ಲಿನ ಬಸವೇಶ್ವರ ನಗರದಲ್ಲಿ ಪದೇ ಪದೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಕಳ್ಳರ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿ ನಗರದ ಶಾರದಾ ವೃತ್ತದಲ್ಲಿ ಭಾನುವಾರ ಸಾರ್ವಜನಿಕರು ಪ್ರತಿಭಟಿಸಿದರು. ಕಳೆದ ತಿಂಗಳು ಬಸವೇಶ್ವರ ನಗರವೊಂದರಲ್ಲೇ ನಾಲ್ಕೈದು ಮನೆಗಳಲ್ಲಿ ಕಳ್ಳತನ ನಡೆದಿತ್ತು. ಹಲವು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಕಳ್ಳರ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇದರಿಂದ ಜನರಲ್ಲಿ ಭೀತಿ ಶುರುವಾಗಿದೆ. ಭಯದಲ್ಲೇ ಕಾಲ ಕಳೆಯುವಂತಾಗಿದೆ. ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಇಷ್ಟೆಲ್ಲ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ತಡೆಗಟ್ಟುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಒಬ್ಬ ಕಳ್ಳನನ್ನೂ ಹಿಡಿದಿಲ್ಲ. ಶಾರದಾ ವೃತ್ತದಲ್ಲಿರುವ ಪೊಲೀಸ್ ಚೌಕಿ ಕೂಡ ಬಳಕೆ ಇಲ್ಲದೇ ಪಾಳು ಬಿದ್ದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ಜಿಲ್ಲಾ ಪೊಲೀಸರು ಬಸವೇಶ್ವರ ನಗರಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ರಾತ್ರಿ ಗಸ್ತು ಹೆಚ್ಚಿಸಬೇಕು. ಬಾಗಿಲು ಬಂದ್ ಮಾಡಿರುವ ಪೊಲೀಸ್ ಚೌಕಿ ಪುನಾರಂಭಿಸಬೇಕು. ಕಳ್ಳರನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸಬೇಕು. ಅಚ್ಚುಕಟ್ಟು ಪ್ರದೇಶಗಳಲ್ಲಿ ಚೌಕಿ ತೆರೆದು ಜನರ ಆತಂಕ ದೂರ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಸಿಪಿಐ ಸಂತೋಷ ಪವಾರ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಶೀಘ್ರದಲ್ಲೇ ಪೊಲೀಸ್ ಚೌಕಿ ಆರಂಭಿಸಿ ಸೂಕ್ತ ಭದ್ರತೆ ಒದಗಿಸಲಾಗುವುದು. ಬಡಾವಣೆಯಲ್ಲಿ ವಾಹನಗಳ ತಪಾಸಣೆ ನಡೆಸಲಾಗುವುದು. ಜನರೂ ಇದಕ್ಕೆ ಸಹಕರಿಸಬೇಕು. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು ಎಂದರು.
ಸ್ಥಳೀಯ ಮುಖಂಡರಾದ ಬಸವರಾಜ ಕೋರಿ, ಸುನೀಲ ಮಾಗನೂರ, ವೆಂಕಟೇಶ ಕಲಾಲ, ಬಿ.ಎ. ಕಲ್ಪಾಡಿ, ಕೆ.ಬಿ. ಮುದ್ರಿ, ಆರ್.ಜಿ.ಭಗವಂತಗೌಡ್ರ, ಗದಿಗೆಪ್ಪ ಮಲಗುಂದ, ಕೆ.ಎಂ. ಹಡಪದ, ಇತರರಿದ್ದರು.