ಹಾವೇರಿ: ಜಿಲ್ಲೆಯಲ್ಲಿ ಆಯುಷ್ಮಾನ್ ಭವ ಆರೋಗ್ಯ ಅಭಿಯಾನ ಸೆ.17ರಿಂದ ಡಿಸೆಂಬರ್ 31ರವರೆಗೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಅಭಿಯಾನಕ್ಕೆ ಸೆ.13ರಂದು ರಾಷ್ಟ್ರಪತಿಯವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸೆ.17ರಿಂದ ಆರಂಬವಾಗಲಿದೆ. ಮನೆ ಮನೆ ಭೇಟಿ ನೀಡಿ ಆಯುಷ್ಮಾನ್ ಕಾರ್ಡ್‌ಗಳ ನೋಂದಣಿ ಮಾಡಿಸಲಾಗುವುದು. ಆಯುಷ್ಮಾನ್ ಆರೋಗ್ಯ ಮೇಳ ಪ್ರತಿ ಮಂಗಳವಾರ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಉಪ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜರುಗಲಿದೆ. ಅಧಿಕ ರಕ್ತದ ಒತ್ತಡ, ಮಧುಮೇಹ, ಕ್ಷಯ ರೋಗ, ಕಣ್ಣಿನ ಸಮಸ್ಯೆಗಳ, ಕುಷ್ಟರೋಗ, ಗರ್ಭಿಣಿ ಮತ್ತು ಬಾಣಂತಿ, ಲಸಿಕೆ ಇತ್ಯಾದಿ ಕುರಿತು ಉಚಿತ ತಪಾಸಣೆ ನಡೆಸಲಾಯುವುದು. ಒಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುವುದು.
ಸ್ವಚ್ಛ ಭಾರತ ಅಭಿಯಾನ, ರಕ್ತದಾನ ಅಭಿಯಾನ ಹಾಗೂ ಅಂಗಾಂಗ ದಾನ ಅಭಿಯಾನದಡಿ ಪ್ರತಿ ಶನಿವಾರ ಒಂದು ಕಾರ್ಯಕ್ರಮದಂತೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುವುದು. ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುವುದು. ಅಂಗಾಂಗ ದಾನ ಕುರಿತು ಪ್ರಮಾಣ ವಚನ ಸ್ವೀಕರಿಸುವುದು ಹಾಗೂ ಜನರಲ್ಲಿ ಮರಣೋತ್ತರ ಅಂಗಾಂಗ ದಾನ ಮಾಡಲು ಪ್ರೇರಿಸಲಾಗುವುದು ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.