ಜಿಲ್ಲೆ

ಆಶಾಕಿರಣ ಆಂದೋಲನಕ್ಕೆ ಜಿಪಂ ಸಿಇಒ ಅಕ್ಷಯ ಶ್ರೀಧರ ಚಾಲನೆ

ಹಾವೇರಿ: ಆರೋಗ್ಯ ಇಲಾಖೆಯಿಂದ ಸಮಗ್ರ ನೇತ್ರ ತಪಾಸಣೆ ಅಂಗವಾಗಿ ಪ್ರತಿ ಮನೆ ಮನೆಗೆ ತೆರಳಿ ಕಣ್ಣಿನ ಪರೀಕ್ಷೆ ಹಾಗೂ ನೇತ್ರದಾನದ ಕುರಿತು ಜಾಗೃತಿ ಮೂಡಿಸುವ ಆಶಾಕಿರಣ ಆಂದೋಲನಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಸೋಮವಾರ ಚಾಲನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ದೇವಗಿರಿ ಗ್ರಾಮಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು. ಅಭಿಯಾನದಡಿ ಪ್ರತಿ ಗ್ರಾಮಕ್ಕೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಕುಟುಂಬದ ಪ್ರತಿ ಸದಸ್ಯರ ಕಣ್ಣಿನ ಪೊರೆ, ಸೋಂಕು ಅಥವಾ ಗಾಯ, ದೃಷ್ಟಿ ದೋಷ ಸಹಿತ ಯಾವುದೇ ಸಮಸ್ಯೆಗಳು ಕಂಡುಬಂದರೆ ನೇತ್ರಾಧಿಕಾರಿಗಳು ಪರೀಕ್ಷೆ ನಡೆಸಲಿದ್ದಾರೆ. ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸರ್ಕಾರಿ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಡಾ.ವಿರಕ್ತಮಠ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.