ಹಾವೇರಿ: ಇಂದಿನ ಕಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಆಸ್ತಿ ಇದ್ದಂತೆ. ಆರೋಗ್ಯಕರ ಜೀವನ ಶೈಲಿಗೆ ಮನೆಯ ಆಹಾರ ಅತ್ಯಗತ್ಯವಾಗಿದ್ದು, ಮನೆಯ ಆಹಾರ ಔಷಧ ಇದ್ದಂತೆ ಎಂದು ತಜ್ಞ ವೈದ್ಯೆ ಡಾ.ಉಮಾ ಬಳಿಗಾರ ಹೇಳಿದರು.
ಆರೋಗ್ಯ ಭಾರತಿ ಹಾಗೂ ಕನಕ ಮಹಿಳಾ ಬಳಗದ ವತಿಯಿಂದ ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಿಳೆಯರ ಆರೋಗ್ಯ ಹಾಗೂ ಮನೆ ಮದ್ದು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ರೀತಿಯ ಆಹಾರ ಸೇವಿಸಬಾರದು ಎಂಬುದು ಬಹಳ ಮುಖ್ಯವಾದದ್ದು. ಮನೆಯಲ್ಲಿ ತಯಾರಿಸಿದ, ತಾಜಾ ಆಹಾರ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದರು.
ಮಹಿಳೆಯರು ಮನೆಯಲ್ಲಿ ಎಲ್ಲರಿಗೂ ಬಿಸಿಯಾದ, ರುಚಿಯಾದ ಆಹಾರ ತಯಾರಿಸಿ ಉಣಬಡಿಸುತ್ತಾರೆ. ಆದರೆ, ತಾವು ಮಾತ್ರ ತಣ್ಣನೆಯ, ಬಾಕಿ ಉಳಿದ ಆಹಾರ ಸೇವಿಸುವ ಮೂಲಕ ಆರೋಗ್ಯದ ಬಗ್ಗೆ ನಿರ್ಲಕ್ಷೃ ವಹಿಸುತ್ತಾರೆ. ಇದರ ಪರಿಣಾಮ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಗೃಹಿಣಿಯರು ಹೀಗೆ ಮಾಡದೇ ಕುಟುಂಬದವರ ಆರೋಗ್ಯದ ಜತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಆಸಕ್ತಿ ತೋರಬೇಕು. ಪೌಷ್ಠಿಕಾಂಶ ಉಳ್ಳ ಆಹಾರ ಸೇವಿಸಬೇಕು, ಸಾಕಷ್ಟು ವಿಶ್ರಾಂತಿ ಪಡೆಯಬೇಕು, ಸ್ವಚ್ಛತೆ, ಆಹಾರ, ಯೋಗ, ಧ್ಯಾನ, ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನೆ ಮದ್ದಿನ ವಿಷಯದ ಬಗ್ಗೆ ಆರೋಗ್ಯ ಭಾರತಿಯ ನಾಗೇಶ ಮಾತನಾಡಿ, ನಮ್ಮ ಮನೆ, ರಸ್ತೆ ಬದಿಯಲ್ಲಿ ಸಿಗುವ ನೆಲನೆಲ್ಲಿ, ದೊಡ್ಡಪತ್ರಿ, ತುಳಸಿ, ಇತರ ಔಷಧೀಯ ಗುಣಗಳು ಇರುವ ಸಸ್ಯಗಳ ಬಗ್ಗೆ ತಿಳಿಸಿದರು.
ಆರೋಗ್ಯ ಭಾರತಿ ಗೌರವಾಧ್ಯಕ್ಷ ಪ್ರಭಾಕರ ಮಂಗಳೂರು, ಪ್ರಮುಖರಾದ ಚಂಪಾ ಹುಣಸಿಕಟ್ಟಿ, ಇತರರು ಉಪಸ್ಥಿತರಿದ್ದರು. ಕನಕ ಮಹಿಳಾ ಬಳಗದ ಅಧ್ಯಕ್ಷೆ ಕವಿತಾ ಮುದುಕಣ್ಣನವರ ಸ್ವಾಗತಿಸಿದರು. ಕೋಶಾಧ್ಯಕ್ಷೆ ರೇಣುಕಾ ಅಂಗಡಿ ಅತಿಥಿಗಳನ್ನು ಪರಿಚಯಿಸಿದರು, ಕಾರ್ಯದರ್ಶಿ ಶಿಲ್ಪಾ ಚುರ್ಚಿಹಾಳ ನಿರೂಪಿಸಿದರು.