ಜಿಲ್ಲೆ

ಗೌರವಧನ ಹೆಚ್ಚಳಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ; ಮಳೆ ನಡುವೆ ಛತ್ರಿ ಹಿಡಿದು ಪ್ರತಿಭಟನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ನಂತರ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರ ಕಚೇರಿಗೆ ತೆರಳಿ, ಕಾರ್ಯಾಲಯದ ಸಿಬ್ಬಂದಿ ಕುಮಾರ ಹರ್ತಿ ಮೂಲಕ ಸಂಸದರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಯೂನಿಯನ್ ವತಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಲವು ಸದಸ್ಯರು ಬೇಡಿಕೆ ಈಡೇರಿಸಲು ಆಗ್ರಹಿಸಿದರು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿಗೆ ಬಂದು 50 ವರ್ಷಗಳಾಗಿದೆ. ಯೋಜನೆಯ ಯಶಸ್ಸಿಗೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅಲ್ಪಗೌರವ ಧನ ನೀಡಲಾಗುತ್ತಿದೆ. ಸೇವಾ ಭದ್ರತೆ ಇಲ್ಲ, ಖಾಯಂ ನೌಕರಿ ನೀಡುತ್ತಿಲ್ಲ. ಕನಿಷ್ಠ ವೇತನ ಸೇರಿ ಯಾವುದೇ ಸೌಲಭ್ಯಗಳಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರದಿಂದ ಕಳೆದ 15 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರ ಗೌರವದನ ಸಂಭಾವನೆ ಹೆಚ್ಚಳ ಮಾಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದಿಂದ 4,500 ರೂ. ಹಾಗೂ ರಾಜ್ಯ ಸರ್ಕಾರದಿಂದ 8,000 ಸೇರಿ 12,500 ರೂ. ಮಾಸಿಕ ಸಂಭಾವನೆ ನೀಡಲಾಗುತ್ತಿದೆ. ಅಂಗನವಾಡಿ ಸಹಾಯಕಿಯರಿಗೆ ಕೇಂದ್ರದಿಂದ 2,250 ರೂ. ಹಾಗೂ ರಾಜ್ಯದಿಂದ 5,250 ರೂ. ಸೇರಿ 7,500 ರೂ. ನೀಡಲಾಗುತ್ತಿದೆ.

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಡಿ ಸರ್ಕಾರಿ ಅಂಗನವಾಡಿ, ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಸ್ಥಾಪಿಸುತ್ತಿರುವುದು, ಮುಖ ಗುರುತಿಸುವಿಕೆಯಿಂದ ಸಮಸ್ಯೆಗಳು ಎದುರಾಗಿವೆ. ಮೊಟ್ಟೆ ಬಿಲ್ ಪಾವತಿ ವಿಳಂಭವಾಗುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿದೆ. ಗ್ರಾಚ್ಯುಟಿ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅರ್ಹರು ಎಂಬ ಸುಪ್ರಿಂಕೋರ್ಟ್ ತೀರ್ಪನ್ನು ಈಗಾಗಲೇ ನಿವೃತ್ತಿಯಾಗಿರುವ ಅವರೆಲ್ಲರಿಗೂ ಅನ್ವಯಿಸುವಂತೆ ನೀಡಲು ಆಡಳಿತಾತ್ಮಕವಾಗಿ ಗ್ರಾಚ್ಯುಟಿಯನ್ನು ಜಾರಿಗೊಳಿಸಬೇಕು ಎಂದು ಕೋರಿದರು.

ಯೂನಿಯನ್ ರಾಜ್ಯ ಸಂಘಟನಾ ಸಂಚಾಲಕ ಜಿ.ಡಿ.ಪೂಜಾರ, ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಜ್ಯೋತಿ ಕುಲಕರ್ಣಿ, ಪಾರ್ವತಿ ಪಾಟೀಲ, ವಿಶಾಲಕ್ಷಮ್ಮ ಹೀರೆಮಠ, ಯಲ್ಲಮ್ಮ ಮರಡೂರ, ಜಯಶ್ರೀ ಲೋಕನಗೌಡ್ರ, ಲೀಲಾವತಿ ಕುಂದಗೊಳ, ಶಿವಲೀಲಾ ಪಾಟೀಲ, ನಾಗರತ್ನಮ್ಮ ರಡ್ಡೇರ, ಇತರರಿದ್ದರು.