ಜಿಲ್ಲೆ

ಅಂಗನವಾಡಿಗಳ 4 ತಿಂಗಳ ಮೊಟ್ಟೆ ಹಣ ಬಿಡುಗಡೆ ಮಾಡಿ; ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನ ಜಮೆ ಮಾಡಿ; ಎಐಟಿಯುಸಿ ಆಗ್ರಹ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಜ್ಯದ ಇತರ ಜಿಲ್ಲೆಗಳ ಅಂಗನವಾಡಿಗಳಿಗೆ ಮೊಟ್ಟೆ ಹಣ ಬಿಡುಗಡೆಯಾಗಿದ್ದರೂ ಜಿಲ್ಲೆಯಲ್ಲಿ ಮಾತ್ರ ಕಳೆದ ನಾಲ್ಕು ತಿಂಗಳಿನಿಂದ ಮೊಟ್ಟೆಯ ಹಣ ಬಿಡುಗಡೆಯಾಗಿಲ್ಲ. ನಾಲ್ಕು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವಧನ ಪಾವತಿಯಾಗಿಲ್ಲ. ಈ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ಜಿಲ್ಲಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1,991 ಅಂಗನವಾಡಿ ಕೇಂದ್ರಗಳಿದ್ದು, 1,988 ಕಾರ್ಯಕರ್ತೆಯರು, 1,991 ಸಹಾಯಕಿಯರು ಅಲ್ಪ ಗೌರವಧನದಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 13,676 ಗರ್ಭಿಣಿಯರಿಗೆ, 12,906 ಬಾಣಂತಿಯರಿಗೆ ಮತ್ತು 3ರಿಂದ 6 ವರ್ಷದೊಳಗಿನ 59,838 ಮಕ್ಕಳು ಸೇರಿ ಒಟ್ಟು 86,420 ಫಲಾನುಭವಿಗಳಿಗೆ ಕೋಳಿ ಮೊಟ್ಟೆ ವಿತರಿಸಲಾಗುತ್ತದೆ. ಪ್ರತಿ ತಿಂಗಳು ಕನಿಷ್ಠ 11 ಲಕ್ಷ ಮೊಟ್ಟೆ ಖರೀದಿಸಬೇಕಿದ್ದು, ಇದಕ್ಕೆ 60 ಲಕ್ಷ ಹಣ ಬೇಕಾಗುತ್ತದೆ. ಸರ್ಕಾರ ಈಗಾಗಲೇ ಸೆಪ್ಟೆಂಬರ್‌ವರೆಗಿನ ಹಣವನ್ನು ಬಿಡುಗಡೆಗೊಳಿಸಿದೆ. ಆದರೆ, ಜಿಲ್ಲಾ ಮಟ್ಟದಿಂದ ಅದು ಬಾಲವಿಕಾಸ ಸಮಿತಿಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಇದರಿಂದ ಕಾರ್ಯಕರ್ತೆಯರು ಸಾಲ ಮಾಡಿ ಮೊಟ್ಟೆ ಖರೀದಿಸುತ್ತಿದ್ದಾರೆ. ಸಂಕಷ್ಟದಲ್ಲಿ ಮುಳುಗಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಪ್ರಧಾನ ಕಾರ್ಯದರ್ಶಿ ಡಿ.ಡಿ.ಪೂಜಾರ, ನೀಲಮ್ಮ ವಾಲಿ, ಕೆ.ಪಿ.ಹಿರೇಮಠ, ಇತರರಿದ್ದರು.
20ರ ಗಡುವು
ಮೂರ್ನಾಲ್ಕು ತಿಂಗಳಿಂದ ಕಾರ್ಯಕರ್ತೆಯರಿಗೆ ಮೊಟ್ಟೆ ಹಣ ಬಂದಿಲ್ಲ, ಗೌರವಧನವೂ ಬಿಡುಗಡೆಯಾಗಿಲ್ಲ. ಸಿಲಿಂಡರ್ ಹಣ, ಕಟ್ಟಡಗಳ ಬಾಡಿಗೆ ಬಾಕಿ ಇದೆ. ಇದರಿಂದ ತೀವ್ರ ಸಮಸ್ಯೆ ಆಗಿದ್ದು, ಈ ಕೂಡಲೇ ಸಂಬಂಧಪಟ್ಟವರು ಅ.20ರೊಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಅ.21ರಿಂದ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಹೊನ್ನಪ್ಪ ಮರೆಮ್ಮನವರ ಎಚ್ಚರಿಕೆ ನೀಡಿದರು.