ಜಿಲ್ಲೆ

ಅಲೆಮಾರಿ ಸಮುದಾಯದಿಂದ ಬೆಳಗಾವಿ ಚಲೋ 13ರಂದು

ಹಾವೇರಿ: ಶೈಕ್ಷಣಿಕ ಮೀಸಲಾತಿ, ವಸತಿ, ಆರೋಗ್ಯ ಸೇರಿದಂತೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.13ರಂದು ಬೆಳಗಾವಿ ಸುವರ್ಣಸೌಧ ಚಲೋ ಕರೆ ನೀಡಲಾಗಿದ್ದು, ಸಾವಿರಾರು ಅಲೆಮಾರಿಗಳು ಸಾಂಸ್ಕೃತಿಕ ವೇಷ ಭೂಷಣಗಳೊಂದಿಗೆ ಭಾಗವಹಿಸಲಿದ್ದಾರೆ ಎಂದು ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯವು ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಿದ್ದು, ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಹಿಂದುಳಿದಿರುವ ಸಮುದಾಯಗಳಿಗೆ ಮೊದಲ ಆದ್ಯತೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ. ಇದರ ಅನ್ವಯ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ 49 ಸೂಕ್ಷ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅತ್ಯಂತ ಹಿಂದುಳಿದಿರುವುದನ್ನು ಪರಿಗಣಿಸಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಡಿ.13ರಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಲೆಮಾರಿ ಬುಡಕಟ್ಟು ಅಧ್ಯಯನ ಕೇಂದ್ರ ತೆರೆಯಬೇಕು. ಹೆಚ್ಚಿನ ಜನಸಂಖ್ಯೆ ಹಾಗೂ ಪ್ರಬಲ ಅಲೆಮಾರಿ ಸಮುದಾಯಗಳಾದ ಕೊರಮ ಮತ್ತು ಕೊರಚ ಸಮುದಾಯಗಳನ್ನು ಹಾಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಬೇರ್ಪಡಿಸಿ, 49 ಸೂಕ್ಷ್ಮಮತ್ತು ಅತಿಸೂಕ್ಷ್ಮಅಲೆಮಾರಿ ಸಮುದಾಯಗಳಿಗೆ ನ್ಯಾಯ ಒದಗಿಸುವುದು. ವಿಧಾನ ಪರಿಷತ್ತಿನ ಆಯ್ಕೆಗಳಲ್ಲಿ ಸಮುದಾಯದಿಂದ ಒಬ್ಬರನ್ನು ಸದಸ್ಯರಾಗಿ ಆಯ್ಕೆ ಮಾಡಬೇಕು. ಶೇ.3ರಷ್ಟು ಒಳಮೀಸಲಾತಿ ಕಲ್ಪಿಸುವುದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಿಗೆ ಅಲೆಮಾರಿ ಆಯೋಗವನ್ನು ಶೀಘ್ರವಾಗಿ ಸ್ಥಾಪಿಸುವುದು. ಹಿಂದಿನ ಸರ್ಕಾರ ಎಸ್‌ಸಿ ಎಸ್ಟಿ ಅಲೆಮಾರಿಗಳು ಮನೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಅನುದಾನ ನೀಡಿ ನಂತರ ವಾಪಸ್ ಪಡೆದ 300 ಕೋಟಿ ರೂ.ಯನ್ನು ಪುನಃ ಬಿಡುಗಡೆ ಮಾಡುವುದು ಪ್ರಮುಖ ಬೇಡಿಕೆಗಳಾಗಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ ನ್ಯಾಗಲಗಂಟಿ, ಮರಿಸ್ವಾಮಿ ರಾಣೇಬೆನ್ನೂರ ಮಾತನಾಡಿದರು. ಮಂಜುನಾಥ ವೇಷಗಾರ, ವಿನಾಯಕ ಚೌಹಾಣ, ಮಲ್ಲೇಶಪ್ಪ ಚನ್ನದಾಸರ, ಹನುಮಂತ ಸಿಂಧೋಳ, ರಂಗಪ್ಪ ಸಿಂಧೋಳ ಇದ್ದರು.